ಸಿದ್ದಾಪುರ, ಫೆ. 28: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಹಾಗೂ ಗುಹ್ಯಾ ಗ್ರಾಮದ ನದಿತೀರದ ಸಂತ್ರಸ್ತರು ಜಿಲ್ಲಾಡಳಿತ ಗುರುತಿಸಿದ ಪುನರ್ವಸತಿ ಜಾಗಕ್ಕೆ ತೆರಳಬೇಕೆಂದು ಕಂದಾಯ ಇಲಾಖೆ ವತಿಯಿಂದ ನೋಟೀಸ್ ಜಾರಿ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಕಾವೇರಿ ನದಿಯ ಪ್ರವಹಿಸುವಿಕೆಗೆ ಸಿದ್ದಾಪುರದ ಕರಡಿಗೋಡು ಹಾಗೂ ಗುಹ್ಯ ಭಾಗದ ನೂರಾರು ಮನೆಗಳು ಹಾನಿಗೊಳಗಾಗಿತ್ತು ಅಲ್ಲದೆ 60ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿವೆ. ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಹಾಗೂ ನದಿ ತೀರದ ನಿವಾಸಿಗಳು ಪುನರ್ವ ಸತಿ ಕಲ್ಪಿಸಿಕೊಡುವಂತೆ ಸರ್ಕಾರವನ್ನು ಹಾಗೂ ಜಿಲ್ಲಾಡಳಿತ ವನ್ನು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವೀರಾಜ ಪೇಟೆ ತಾಲೂಕಿನ ಬಿ. ಶೆಟ್ಟಿಗೇರಿ ಎಂಬಲ್ಲಿ ಜಾಗ ಗುರುತಿಸಲಾಗಿದೆ. ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲೆಂದು ತಾ. 26ರಂದು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಸಿದ್ದಾಪುರ ವ್ಯಾಪ್ತಿಯ ನದಿ ತೀರದ ಸಂತ್ರಸ್ತರು ಹಾಗೂ ನಿವಾಸಿಗಳು ಜಿಲ್ಲಾಡಳಿತ ಗುರುತಿಸಿದ ಸ್ಥಳ ದೂರವಾಗಿದೆ ಎಂದು ಇತ್ತೀಚೆಗೆ ಸಭೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಆ ಜಾಗವನ್ನು ನಿರಾಕರಿಸಿದ್ದರು. ತಾ. 26ರಂದು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡರು ಸಿದ್ದಾಪುರ ಪಂಚಾಯಿತಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಲಾಟರಿ ಮುಖಾಂತರ ನಿವೇಶನಗಳನ್ನು ಹಂಚಿಕೆ ಮಾಡಲು ಸಿದ್ಧತೆ ಕೈಗೊಂಡಿದ್ದರು. ಆದರೆ ಸಂತ್ರಸ್ತರು ಯಾರೂ ಕೂಡ ನಿವೇಶನ ಪಡೆದುಕೊಳ್ಳಲು ಬಾರದ ಕಾರಣ ಉಪವಿಭಾಗಾಧಿಕಾರಿ ಹಿಂತಿರುಗಿ ಹೋದರು.

ಇದೀಗ ಜಿಲ್ಲಾಡಳಿತವು ಗುರುತಿಸಿರುವ ಬಿ. ಶೆಟ್ಟಿಗೇರಿ ಜಾಗಕ್ಕೆ ಸಂತ್ರಸ್ತರು ತೆರಳುವಂತೆ ನೋಟೀಸ್ ಜಾರಿ ಮಾಡಲು ಕಂದಾಯ ಇಲಾಖೆಯು ಕ್ರಮಕೈಗೊಂಡಿದೆ. ಮಾರ್ಚ್ 9ರಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲಾಗುವುದೆಂದು ಜಿಲ್ಲಾಡಳಿತದ ನೋಟೀಸಿನಲ್ಲಿ ತಿಳಿಸಲಾಗಿದೆ ಮಾ.9ರಂದು ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ತಿಳಿಸಲಾಗಿದೆ ಯಾರಿಗೆ ನಿವೇಶನ ಬೇಡವಾದರೆ ಕಂದಾಯ ಇಲಾಖೆಯು ನೀಡುವ ಅರ್ಜಿಯಲ್ಲಿ ಭರ್ತಿ ಮಾಡಿ ಕೊಡಬೇಕಾಗಿದೆ. ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕರು ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಓ ನೋಟೀಸ್ ಅನ್ನು ಪ್ರತಿ ಮನೆಗಳಿಗೆ ನೀಡಲು ಕ್ರಮಕೈಗೊಂಡಿದ್ದಾರೆ .