ಮಡಿಕೇರಿ, ಫೆ. 29: ಇತ್ತೀಚೆಗೆ ಬಳ್ಳಾರಿಯ ಕೂಡ್ಲಿಗಿ ಬಳಿ ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟ ಜಿಲ್ಲೆಯ ವಾಹನ ಚಾಲಕ ಲೋಹಿತಾಶ್ವ ಪೂಜಾರಿ ಕುಟುಂಬಕ್ಕೆ ಹಾಗೂ ಸಂಬಂಧಿಸಿದ ಕಾರು ಮಾಲೀಕನಿಗೆ ಒಟ್ಟು ರೂ. 1.10 ಲಕ್ಷ ಸಹಾಯ ಧನವನ್ನು ಕೊಡಗು ಜಿಲ್ಲಾ ಟ್ಯಾಕ್ಷಿ ವಾಹನ ಚಾಲಕರು ಮತ್ತು ಮಾಲೀಕರ ಸಂಘ (ಕೆ.ಟಿ.ಡಿ.ಒ) ವತಿಯಿಂದ ನೀಡಲಾಯಿತು.

ನಗರದ ಹೊಟೇಲ್ ಚಾಯ್ಸ್ ಸಭಾಂಗಣದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಈ ಸಂಬಂಧ ಚೆಕ್‍ನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ನಂತರ ಮಾತನಾಡಿದ ವಿನ್ಸೆಂಟ್ `ಚಾಲಕರಾಗಿದ್ದ ಲೋಹಿತಾಶ್ವ ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಈ ಬಗ್ಗೆ ಮನಗಂಡ ರಾಜ್ಯ ಕೆ.ಟಿ.ಡಿ.ಒ ಸಂಘ ಹಾಗೂ ಜಿಲ್ಲಾ ಸಂಘದ ಸದಸ್ಯರು ರೂ. 1.10 ಲಕ್ಷ ಹಣ ಸಂಗ್ರಹಿಸಿದೆ. ಈ ಹಣವನ್ನು ಲೋಹಿತಾಶ್ವ ಕುಟುಂಬದ ಇಬ್ಬರು ಮಕ್ಕಳಿಗೆ ರೂ. 80 ಸಾವಿರ ಹಾಗೂ ಅಪಘಾತದಲ್ಲಿ ನಷ್ಟಗೊಳಗಾದ ಕಾರು ಮಾಲೀಕ ಪ್ರವೀಣ್‍ಗೆ ರೂ. 30 ಸಾವಿರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನು ಕೆಟಿಡಿಒ ಕೊಡಗು ಸಂಘದಿಂದ ರೂ. 33,955, ರಾಜ್ಯದ ಸಂಘದಿಂದ ರೂ. 44,366, ಮಡಿಕೇರಿ ಸ್ಪೈಸಸ್ ರೂ. 10 ಸಾವಿರ, ಚಾಯ್ಸ್ ಕೂರ್ಗ್ ಚಾಕಲೇಟ್ ಸಂಸ್ಥೆಯಿಂದ ರೂ. 7 ಸಾವಿರ, ಮಡಿಕೇರಿ ಉದ್ಯಮಿ ಪೊನ್ನಚ್ಚನ ಮಧು, ಕಾವೇರಿ ಸಿಲ್ಕ್ ಸಂಸ್ಥೆ ಹಾಗೂ ಕುಶಾಲನಗರ ಟಾಫ್ ಇನ್ ಟೌನ್ ಹೊಟೇಲ್ ಮಾಲೀಕರು ತಲಾ ರೂ. 5 ಸಾವಿರ ಆರ್ಥಿಕ ನೆರವು ನೀಡಿದ್ದಾರೆ ಎಂದು ವಿನ್ಸೆಂಟ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ರಕ್ಷಾಧಿಕಾರಿ ಗೋಣಿಕೊಪ್ಪಲಿನ ಎಂ.ಎ. ರಫೀಕ್, ಪ್ರಧಾನ ಕಾರ್ಯದರ್ಶಿ ಪೊನ್ನಂಪೇಟೆಯ ರಕೀಬ್, ಖಜಾಂಚಿ ಬಿ.ಎಲ್. ತಿರುಪತಿ, ಜಂಟಿ ಖಜಾಂಚಿ ರಾಘವೇಂದ್ರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.