ಸುಂಟಿಕೊಪ್ಪ, ಫೆ. 29: ಜನರ ಉಪಯೋಗಕ್ಕೆ ಅಗತ್ಯವಾಗಿ ಬೇಕಾದ ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು, ಶುಶ್ರೂಷಕಿ, ‘ಡಿ’ಗ್ರೂಪ್ ನೌಕರರ ಕೊರತೆ ಜೌಷಧಿ, ಮಾತ್ರೆ ಚುಚ್ಚುಮದ್ದು ಅಲಭ್ಯತೆಯಿಂದ ಇದ್ದೂ ಇಲ್ಲದಂತಾಗಿದೆ.
ಸುಂಟಿಕೊಪ್ಪವು ಹೋಬಳಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಹೋಬಳಿ ವ್ಯಾಪ್ತಿಗೆ ಒಳಗೊಂಡಂತೆ, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಹರದೂರು, ಕೆದಕಲ್, ಸುಂಟಿಕೊಪ್ಪ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಭಾಗದಲ್ಲಿ ಕೃಷಿಕರು, ಬಡವರು, ಕೂಲಿ ಕಾರ್ಮಿಕರು ಈ ಆಸ್ಪತ್ರೆಯನ್ನೇ ಅವಲಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿರುವ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾಮಸ್ಥರು ದಶಕಗಳಿಂದಲೂ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಆ ಕನಸು ಇನ್ನೂ ಈಡೇರಿಲ್ಲ.
ಸುಂಟಿಕೊಪ್ಪ ಸೇರಿದಂತೆ ಇತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಸಂಖ್ಯೆಯು 20,000 ಕ್ಕೂ ಅಧಿಕ ಜನಸಂಖ್ಯೆಯನ್ನು ಸುಂಟಿಕೊಪ್ಪ ಆರೋಗ್ಯ ಕೇಂದ್ರಕ್ಕೆ ಒಳಪಡುವ ಗ್ರಾಮದಲ್ಲಿ ಇದೆ. ಆಸ್ಪತ್ರೆಯನ್ನು ಸರಕಾರ ಮಟ್ಟದಲ್ಲಿ ಮೇಲ್ದರ್ಜೆಗೇರಿಸಿದರೆ ವೈದ್ಯರು ಶುಶ್ರೂಷಕಿಯರ ‘ಡಿ’ ಸಂಖ್ಯೆಯೂ ಹೆಚ್ಚಾಗಲಿದ್ದು, ಜನರಿಗೆ ಪ್ರಯೋಜನವಾಗಲಿದೆ. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇದು ಈಡೇರಲಿಲ್ಲ. ಪ್ರಸ್ತುತ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಓರ್ವ ವೈದ್ಯರು, ಇರ್ವರು ಶುಶ್ರೂಷಕಿಯರು ಇಬ್ಬರು ‘ಡಿ’ ಗ್ರೂಪ್ ನೌಕರರು ಇದ್ದಾರೆ.
ಇಬ್ಬರು ವೈದ್ಯರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದು, ಓರ್ವರನ್ನು ಇದೀಗ ಮಾದಾಪುರ ಸರಕಾರಿ ಆಸ್ಪತ್ರೆಗೆ ನಿಯೋಜನೆಗೊಳಿಸಲಾಗಿದೆ. ಪ್ರತಿ ದಿನ 100 ಕ್ಕೂ ಅಧಿಕ ಹೊರ ರೋಗಿಗಳು ತಪಾಸಣೆಗೆ ಬರುತ್ತಿದ್ದು, ಒಳರೋಗಿಗಳು ಹೆರಿಗೆ ಇತ್ಯಾದಿಗಾಗಿ ಬರುತ್ತಿದ್ದಾರೆ. ಓರ್ವ ವೈದ್ಯರು ಎಲ್ಲಾ ಕೆಲಸವನ್ನು ನಿಭಾಯಿಸುವುದು ಕಷ್ಟಸಾಧ್ಯ ಹಾಗೆಯೇ ಶುಶ್ರೂಷಕಿಯರು ರಾತ್ರಿ ಹಗಲು ಸೇವೆ ಸಲ್ಲಿಸಬೇಕಾಗಿದೆ. ಜೌಷಧಿ, ಮಾತ್ರೆ ಕೊಡುವುದು, ಚುಚ್ಚುಮದ್ದು ನೀಡುವುದು ಹಾಗೂ ಗಾಯಗಳಿಗೆ ಬ್ಯಾಂಡೆಂಜ್ ಒಳ ರೋಗಿಗಳಿಗೆ ಡ್ರೀಪ್ಸ್ ನೀಡುವುದನ್ನು ಒಬ್ಬರೇ ಕಾರ್ಯನಿರ್ವಹಿಸುವುದು ಒತ್ತಡದಲ್ಲೇ ಆಗಿದೆ.
ಜೌಷಧಿ ಚುಚ್ಚುಮದ್ದು ಇಲ್ಲ: ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನವೊಂದಕ್ಕೆ ನೂರಕ್ಕೂ ಅಧಿಕ ಮಂದಿ ಚಿಕಿತ್ಸೆಗಾಗಿ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸುತ್ತಾರೆ. ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡುವಷ್ಟೇ ಜೌಷಧಿಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಎಲ್ಲಾ ದಿನಗಳಲ್ಲೂ ರೋಗಿಗಳಿಗೆ ಅಗತ್ಯವಾಗಿ ಜ್ವರ ಶೀತಕ್ಕೆ ಬೇಕಾದ ಚುಚ್ಚುಮದ್ದು, ಬಿ.ಪಿ. ಮಾತ್ರೆ ಇತರ ಖಾಯಿಲೆಗಳಿಗೆ ಬೇಕಾದ ಜೌಷಧಿ ಮಾತ್ರೆ ಲಭ್ಯವಾಗುತ್ತಿಲ್ಲ. ಮಾತ್ರೆಗಳನ್ನು ಖಾಸಗಿ ಜೌಷಧಿ ಕೇಂದ್ರಗಳಿಂದಲೇ ರೋಗಿಗಳು ಖರೀದಿಸಬೇಕಾಗಿದೆ. ಒಟ್ಟಾರೆ ಜನೋಪಯೋಗಕ್ಕಾಗಿ ಸರಕಾರ ತೆರೆದಿರುವ ಸರಕಾರಿ ಆಸ್ಪತ್ರೆ ಜನಸಾಮಾನ್ಯರಿಗೆ ಇದ್ದೂ ಇಲ್ಲದಂತಾಗಿದೆ.
ಶಾಸಕರು, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿ.ಪಂ. ಸದಸ್ಯರು ಈ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕಾಯಕಲ್ಪ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟಂತೆ 3 ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಸಂಬಂಧಿಸಿದ್ದಾಗಿದೆ. 3 ಕ್ಷೇತ್ರದ ಜಿ.ಪಂ. ಸದಸ್ಯರು ಧ್ವನಿಗೂಡಿಸಿ ಸಮಸ್ಯೆಗೆ ಮುಕ್ತಿ ಒದಗಿಸಬೇಕಾಗಿದೆ.
ಮರಣೋತ್ತರ ಪರೀಕ್ಷಾ ಸಿಬ್ಬಂದಿಯೇ ಇಲ್ಲ: ಸುಂಟಿಕೊಪ್ಪ ಪಟ್ಟಣದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ಜಿಲ್ಲೆಯನ್ನು ವೀಕ್ಷಿಸಲು ಹೊರ ಜಿಲ್ಲೆ, ರಾಜ್ಯ, ಹೊರರಾಜ್ಯ, ವಿದೇಶಗಳಿಂದ ನಿತ್ಯ ನೂರಾರೂ ಪ್ರವಾಸಿಗರು ಈ ಹೆದ್ದಾರಿಯಲ್ಲಿ ಸಂಚರಿಸುತ್ತಾರೆ. ಆ ಸಂದರ್ಭ ವಾಹನ ಅವಘಡಗಳು ಸಂಭವಿಸಿ ಸಾವು ನೋವು, ಆತ್ಮಹತ್ಯೆ ಪ್ರಕರಣದಲ್ಲಿ ವೈದ್ಯರಿಂದ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲು ‘ಡಿ’ ಗ್ರೂಫ್ ನೌಕರ ಅತ್ಯಗತ್ಯವಾಗಿದ್ದು ಆ ಹುದ್ದೆಯೂ ಹಲವು ವರ್ಷಗಳಿಂದ ಖಾಲಿ ಇದೆ. ಇದರಿಂದ ಮಡಿಕೇರಿ ಹಾಗೂ ಕುಶಾಲನಗರ ಆಸ್ಪತ್ರೆಯನ್ನೇ ಅವಲಂಭಿಸುವ ಅನಿವಾರ್ಯತೆ ಜನರಿಗೆ ತಲೆದೋರಿದೆ. ಈ ಎಲ್ಲಾ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಶಾಶ್ವತ ಪರಿಹಾರವನ್ನು ನೀಗಿಸಲು ಕ್ರಮಕೈಗೊಳ್ಳಬೇಕೆಂದು ವಿವಿಧ ಸಂಘ-ಸಂಸ್ಥೆಯವರು ಸಾರ್ವಜನಿಕರು ಒತ್ತಾಯಿಸಿದ್ದಾರೆ.