ಕಾಲ್ಸ್ ಶಾಲೆ
ಮಡಿಕೇರಿ, ಫೆ. 29: ದೇಶದ ಖ್ಯಾತ ಭೌತಶಾಸ್ತ್ರ ವಿಜ್ಞಾನಿ, ‘ನೊಬೆಲ್’ ಪ್ರಶಸ್ತಿ ವಿಜೇತ ಸರ್ ಸಿ.ವಿ. ರಾಮನ್ ಅವರ ‘ರಾಮನ್ ಎಫೆಕ್ಟ್’ ಸಂಶೋಧನೆ ನೆನಪಿಗಾಗಿ ಫೆ. 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಗೋಣಿಕೊಪ್ಪ ಕಾಲ್ಸ್ ಶಾಲೆಯಲ್ಲಿ ಆಚರಿಸಲಾಯಿತು.
ವಿದ್ಯಾರ್ಥಿಗಳು ರಾಸಾಯನ ಶಾಸ್ತ್ರದ ಅಂಶಗಳನ್ನು ಒಳಗೊಂಡ ವಿಷಯವನ್ನು ಮಂಡಿಸಿದರು. ಹಲವು ಅಂಶಗಳನ್ನೊಳಗೊಂಡ ‘ಪೀರಿಯಾಡಿಕ್ ಟೇಬಲ್’ಗೆ 150 ವರ್ಷ ತುಂಬಿದ ಸಲುವಾಗಿ ಇದಕ್ಕೆ ಸಂಬಂಧಿಸಿದ ಹಾಡೊಂದನ್ನು ಹಾಡಿ ರಂಜಿಸಿದರು. ನಂತರ ಕಿರಿಯ ವಿದ್ಯಾರ್ಥಿಗಳು ವಾಯು, ಅಗ್ನಿ, ನೀರಿನ ಅಂಶಗಳನ್ನು ಒಳಗೊಂಡ ಪ್ರಯೋಗಗಳನ್ನು ಮಾಡಿ ಪ್ರದರ್ಶಿಸಿ, ವಿವರಿಸಿದರು.
ಉಳಿದಂತೆ ವಿದ್ಯಾರ್ಥಿಗಳಿಗೆ ವಿಜ್ಞಾನ ಆಧಾರಿತ ಕಥೆ ಬರೆಯುವುದು, ಪದ್ಯ ರಚನೆ, ‘ಸ್ಪೆಲ್ ಬಿ’ ‘ಟ್ರೆಷರ್ ಹಂಟ್’ ಮುಂತಾದ ಹತ್ತು ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜ್ಞಾನ ಆಧಾರಿತ ಚಲನಚಿತ್ರವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಸಂತ ಅನ್ನಮ್ಮ ಕಾಲೇಜು
ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಬಿ.ಎಸ್.ಸಿ. ವಿಭಾಗದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಜ್ಞಾನವು ಒಂದು ಜೀವನ ಪದ್ಧತಿಯಾಗಿದೆ. ಮನುಷ್ಯನ ಸರ್ವತೋಮುಖ ಬೆಳವಣಿಗೆಗೂ ವಿಜ್ಞಾನಕ್ಕೂ ನಿಕಟ ಸಂಬಂಧವಿದೆ. ಖ್ಯಾತ ವಿಜ್ಞಾನಿ ಆಲ್ಫ್ರೆಡ್ ನೋಬೆಲ್ ಅವರ ಕುರಿತು ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಕಾವೇರಿ ಶಾಲೆಯ ಅಧ್ಯಕ್ಷರು ಹಾಗೂ ವಿಜ್ಞಾನ ಶಿಕ್ಷಕ ಬಿ.ಎಸ್. ಸುಧೀಶ್ಕುಮಾರ್ ಮಾತನಾಡಿ, ದೈನಂದಿನ ಜೀವನದಲ್ಲಿನ ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಜ್ಞಾನದ ಮಹತ್ವವನ್ನು ವಿವರಿಸಿದರು ಮತ್ತು ವಿಜ್ಞಾನ ದಿನಾಚರಣೆಯ ಮಹತ್ವದ ಸಂದೇಶ ನೀಡಿದರು.
ಕಾಲೇಜಿನ ಪ್ರಾಂಶುಪಾಲ ರೆ. ಫಾ. ರೋನಿ ರವಿಕುಮಾರ್ ಮಾತನಾಡಿ, ವಿಜ್ಞಾನದ ಮಹತ್ವವನ್ನು ವಿದ್ಯಾರ್ಥಿಗಳು ಅರಿತು ನಡೆಯಬೇಕು. ಆ ಮೂಲಕ ದೇಶಕ್ಕೆ ಕೊಡುಗೆಯನ್ನು ನೀಡಬೇಕೆಂದರು. ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ತೃಪ್ತಿ ಹಾಗೂ ಕಾಲೇಜಿನ ಗಣಿತ ಉಪನ್ಯಾಸಕಿ ರಶ್ಮಿ ಹಾಜರಿದ್ದರು. ರಾಸಾಯನಶಾಸ್ತ್ರ ಉಪನ್ಯಾಸಕಿ ನಿಶಾ ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕಿ ಜೋಶಿಕಾ ವಂದಿಸಿದರು. ಕಾಲೇಜಿನ ಪಿ.ಯು. ಮತ್ತು ಪದವಿಯ ಎಲ್ಲಾ ವಿಜ್ಞಾನ ವಿದ್ಯಾರ್ಥಿಗಳು ಭಾಗವಹಿಸಿದ್ದರು.