ಭಾಗಮಂಡಲ, ಫೆ. 29: ಸಮೀಪದ ಚೆಟ್ಟಿಮಾನಿಯ ಪದಕಲ್ಲು ಗ್ರಾಮದ ಭಗವತಿ ದೇವಸ್ಥಾನದ ಭಗವತಿ ಸಾನಿಧ್ಯ ಪುನರ್‍ಪ್ರತಿಷ್ಠೆ ಮತ್ತು ಅಷ್ಟಬಂಧ ಕಲಶಾಭಿಷೇಕ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.

ಸುಮಾರು 12ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಪ್ರತಿಷ್ಠಾ ಕಾರ್ಯಗಳು ಜರುಗಿದವು. ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ತಾ. 26 ರಂದು ಗ್ರಾಮದ ಮಹಿಳೆಯರು ಕುಂಭ ಕಲಶದೊಂದಿಗೆ ತಂತ್ರಿಗಳನ್ನು ಸ್ವಾಗತಿಸಿದರು. ಸಂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪುನ:ಪ್ರತಿಷ್ಠೆ ಕಾರ್ಯಕ್ರಮಗಳು ಆರಂಭಗೊಂಡಿದ್ದು ರಕ್ಷೋಘ್ನ ಹೋಮ ಹಾಗೂ ವಾಸ್ತುಬಲಿ, ತಾ. 27 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಬಿಂಬಶುದ್ಧಿ, ಅನುಜ್ಞಾ ಕಲಶ ಪೂಜೆ ಜೀವ ಕಲಶಪೂಜೆಗಳು ಜರುಗಿದವು.ಸಂಜೆ ಆರು ಗಂಟೆಗೆ ಕುಂಭೇಶ, ಕರ್ಕರಿ, ಕಲಶ ಪೂಜೆ, ಅದಿವಾಸ ಹೋಮ, ದ್ರವ್ಯ ಕಲಶ ಪೂಜೆ, ಪರಿಕಲಶಪೂಜೆ, ಮತ್ತು ಕಲಶಾಧಿವಾಸ ಜರುಗಿತು.

ಶುಕ್ರವಾರ ಬೆಳಿಗ್ಗೆ 6ಗಂಟೆಯಿಂದ ಗಣಪತಿ ಹೋಮ, ಶ್ರೀಭಗವತಿ ಸಾನಿಧ್ಯ, ಪುನರ್‍ಪ್ರತಿಷ್ಠೆ, ಅಷ್ಟಬಂಧ ಲೇಪನ, ಶ್ರೀ ಜೀವ ಕಲಶಾಭಿಷೇಕ ಶಾಂತಿ ಹೋಮ, ಪ್ರತಿಷ್ಠಾ ಹೋಮ, ಹೀಮ ಕಲಶಾಭಿಷೇಕ, ಪರಿಕಲಶಾಭಿಷೇಕ, ಮತ್ತು ದ್ರವ್ಯ ಕಲಶಾಭಿಷೇಕ ಜರುಗಿತು.

ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಶ್ರೀಭಗವತಿ ಸಾನಿಧ್ಯ, ಪುನರ್‍ಪ್ರತಿಷ್ಠೆ, ಅಷ್ಟಬಂಧ ಲೇಪನ, ಶ್ರೀ ಜೀವ ಕಲಶಾಭಿಷೇಕ ಶಾಂತಿ ಹೋಮ, ಪ್ರತಿಷ್ಟಾ ಹೋಮ, ಹೀಮ ಕಲಶಾಭಿಷೇಕ, ಪರಿಕಲಶಾಭಿಷೇಕ, ಮತ್ತು ದ್ರವ್ಯ ಕಲಶಾಭಿಷೇಕ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ಮಧ್ಯಾಹ್ನ ಮಹಾಪೂಜೆ ನಡೆದ ಬಳಿಕ ಭಕ್ತರಿಗೆ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಿಸಲಾಯಿತು.

ಸುಮಾರು 800 ವರ್ಷಗಳ ಹಿಂದೆ ಪದಕಲ್ಲು ಗ್ರಾಮದ ಪೊವದಿ ಭಗವತಿ ದೇವಿಯು ಪದಕಲ್ಲು ಗ್ರಾಮದಲ್ಲಿ ನೆಲೆನಿಂತಿದ್ದು ಗ್ರಾಮದ ತಕ್ಕರು ಕಾವುಕಾರರು, ಗ್ರಾಮಸ್ಥರು ಸೇರಿ ಈಗಿನ ಭಗವತಿ ದೇವಾಲಯದಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.

ಈ ವರ್ಷ ವಾರ್ಷಿಕೋತ್ಸವ ಏಪ್ರಿಲ್ 21 ರಂದು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಗೇರಿರ ಜಗದೀಶ್ ಸೋಮಯ್ಯ ತಿಳಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಂಗೇರಿರ ಕುಂಞಪ್ಪ, ಕಾರ್ಯದರ್ಶಿ ತ್ಯಾಗರಾಜ್, ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡು ಪ್ರತಿಷ್ಠಾಪನಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.