ಕೂಡಿಗೆ, ಫೆ. 29: ಗ್ರಾಮಗಳ ಹಾಗೂ ಜನರ ಸಮಸ್ಯೆಯನ್ನು ಅರಿತು ಬಗೆಹರಿಸಬೇಕಾದ ಜನಪ್ರತಿನಿಧಿಗಳೇ ಸಭೆಯ ವೇದಿಕೆಯಲ್ಲಿಯೇ ಕೂಗಾಡಿ ಸಭೆಯಲ್ಲಿ ಗಲಭೆ ಎಬ್ಬಿಸಿದ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ನಡೆಯಿತು.

ಸಭೆಯು ಪ್ರಾರಂಭಗೊಂಡ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದ ವಿಚಾರದ ಬಗ್ಗೆ ಗ್ರಾಮಸ್ಥರು ಹಾಗೂ ನೋಡಲ್ ಅಧಿಕಾರಿಯೊಂದಿಗೆ ಪರಸ್ಪರ ಚರ್ಚೆಗಳು ನಡೆದವು. ಮುಖ್ಯವಾಗಿ ಬೇಕಾಗಿರುವ ಆಹಾರ ಇಲಾಖೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಬಾರದೆ ಇರುವ ಬಗ್ಗೆ ಸದಸ್ಯರನ್ನೊಳಗೊಂಡಂತೆ ಗ್ರಾಮಸ್ಥರು ನೋಡಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.

ನಂತರ ಗ್ರಾಮಸ್ಥರೊರ್ವರು ಕುಡಿಯುವ ನೀರಿನ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ ಕೂಡುಮಂಗಳೂರು ಗ್ರಾಮಕ್ಕೆ ಶುದ್ಧಕುಡಿಯುವ ನೀರಿನ ಘಟಕವು ಕಳೆದ ಎರಡು ವರ್ಷಗಳಿಂದಲೂ ನಾಲ್ಕು ಗ್ರಾಮಸಭೆಗಳಲ್ಲಿ ಚರ್ಚಿಸಿದರೂ ಸಹ ಈ ಭಾಗದಲ್ಲಿ ಶುದ್ಧಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸದ ಬಗ್ಗೆ ಚರ್ಚೆಗಳು ಗ್ರಾಮಸ್ಥರ ಹಾಗೂ ಜನಪ್ರತಿನಿಧಿಗಳ ನಡುವೆ ನಡೆಯಿತು.

ಈ ವಿಷಯವಾಗಿ ಕಾವೇರಿ ನದಿಯು ಈ ಭಾಗದಲ್ಲಿ ಹರಿಯುತ್ತಿದ್ದರೂ ಕಾವೇರಿ ನದಿ ನೀರನ್ನು ಕುಡಿಯುವ ಭಾಗ್ಯ ಇನ್ನು ದೊರೆತಿಲ್ಲ. ಹೆಬ್ಬಾಲೆಯಿಂದ ಮುಳ್ಳುಸೋಗೆವರೆಗೆ ಇರುವ ಬೃಹತ್ ಕುಡಿಯುವ ನೀರಿನ ಯೋಜನೆಗೆ ಗ್ರಾಮ ಪಂಚಾಯಿತಿ ವತಿಯಿಂದ ರೂ. 2.5 ಲಕ್ಷ ರೂಗಳನ್ನು ನೀಡಲಾದರೂ ಸಹ ಆ ನೀರು ಕೂಡುಮಂಗಳೂರು ವ್ಯಾಪ್ತಿಗೆ ದೊರಕುತ್ತಿಲ್ಲ. ಮುಖ್ಯವಾಗಿ ಬೇಕಾಗಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಗಮನಹರಿಸದ ಕ್ಷೇತ್ರದ ಶಾಸಕರು ರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಕುಡಿಯುವ ನೀರಿನ ಘಟಕದ ಸ್ಥಾಪನೆಯ ಬಗ್ಗೆ ನಿರ್ಲಕ್ಷ್ಯಿಸಿದ್ದಾರೆ ಎಂದು ಗ್ರಾ.ಪಂ ಸದಸ್ಯ ಮಹೇಶ್ ಕಾಳಪ್ಪ ಆರೋಪಿಸಿದರು.

ಇದಕ್ಕೆ ಉತ್ತರವಾಗಿ ವೇದಿಕೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ಇದುವರೆಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಯಾವುದೇ ಅರ್ಜಿಗಳು ಸಹ ಬಂದಿಲ್ಲ. ಎಲ್ಲಾ ವಾರ್ಡ್‍ಗಳಿಗೂ ಜನಸಂಖ್ಯೆಯ ಆಧಾರದ ಅನುಗುಣವಾಗಿ ಜಿ.ಪಂ ಅನುದಾನದಲ್ಲಿ ಕೊಳವೆಬಾವಿಗಳನ್ನು ಕೊರೆಸಿ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದೆ. ಆದರೆ, ಪ್ರಕೃತಿ ವಿಕೋಪ ಮತ್ತು ಸರ್ಕಾರದ ಅನುದಾನದಲ್ಲಿ ಮಳೆಹಾನಿ ಪ್ರದೇಶಗಳಲ್ಲಿ ರಸ್ತೆ ದುರಸ್ತಿಗೆ ಬಂದ ಹಣದಲ್ಲಿ ರಸ್ತೆ ಕಾಮಗಾರಿ ಮಾಡುವ ಬದಲು ಕುಡಿಯುವ ನೀರಿನ ಕಾಮಗಾರಿಗಳನ್ನು ಮಾಡಲು ಸಾಧ್ಯವೆ. ಯಾವ ಯಾವ ಯೋಜನೆಗೆ ಅನುದಾನ ಮಂಜೂರಾಗಿರುತ್ತದೆಯೋ ಆ ಯೋಜನೆಯ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದ್ದಾರೆ ಎಂದು ಪ್ರತ್ಯುತ್ತರ ನೀಡಿದರು.

ಈ ವಿಷಯವಾಗಿಯೇ ಗ್ರಾ.ಪಂ ಸದಸ್ಯ ಬಾಸ್ಕರ್‍ನಾಯಕ್ ಅವರು ಸಹ ದನಿಗೂಡಿಸಿದ ಸಂದರ್ಭ ಜನಪ್ರತಿನಿಧಿಗಳ ನಡುವೆಯೇ ಕೂಗಾಟವೇ ನಡೆಯಿತು. ಜನಪ್ರತಿನಿಧಿಗಳ ಕಚ್ಚಾಟವನ್ನು ಕಂಡ ಸಭೆಯಲ್ಲಿದ್ದ ಗ್ರಾಮಸ್ಥರಿಗೆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳೇ ತಮಗೆ ಇಷ್ಟಬಂದಂತೆ ಕೂಗಾಡಿ ಕಿತ್ತಾಡಿದರೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕಾದವರು ಯಾರು ಎಂದು ಗ್ರಾಮಸ್ಥರು ಸಭೆಯಿಂದ ಹೊರ ನಡೆಯಲು ಮುಂದಾದ ಘಟನೆ ಕಂಡುಬಂದಿತು.

ಸಭೆಯಲ್ಲಿದ್ದ ಬೆರಳೆಣಿಕೆಯಷ್ಟೇ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಸವಲತ್ತುಗಳ ಬಗ್ಗೆ ತಿಳಿಸಿದರು.

ಗ್ರಾಮಸ್ಥರಾದ ನಾಗರಾಜ್, ಕಿರಣ್, ನವೀನ್‍ದಾಸ್, ಪುಟ್ಟರಾಜು, ರಾಜು ಮೊದಲಾದವರು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳ ಬಗ್ಗೆ ಸಭೆಗೆ ತಿಳಿಸಿದರು. ಸಮಸ್ಯೆಗಳನ್ನು ಬಗೆಹರಿಸುವ ರೂಪ ಕಂಡುಕೊಳ್ಳದೆ ಸಭೆಯು ತಕ್ಕಮಟ್ಟಿಗೆ ನಡೆದು ಅಂತ್ಯಗೊಂಡಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ, ತಾ.ಪಂ ಸದಸ್ಯ ಗಣೇಶ್, ನೋಡಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ಗಣೇಶ್ ಸೇರಿದಂತೆ ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿ ಆಯೆಷಾ ಇದ್ದರು.