ಕೂಡಿಗೆ, ಫೆ. 29: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕ್ರೀಡಾಂಗಣವು ಕಳೆದ ಹತ್ತು ವರ್ಷಗಳಿಂದಲೂ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಹಾಳಾಗುವ ಪರಿಸ್ಥಿತಿಯಲ್ಲಿದೆ. ಮೈದಾನವು ಸಮೀಪದಲ್ಲಿರುವ ಕೂಡಿಗೆ ಪದವಿಪೂರ್ವ ಕಾಲೇಜು, ಹಿರಿಯ ಪ್ರಾಥಮಿಕ ಶಾಲೆ, ಡಯಟ್ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಮೈದಾನವು ಹತ್ತು ಎಕರೆಗೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು, ಇದೀಗ ಕುರುಚಲು ಗಿಡಗಳು ಬೆಳೆದು ನಿಂತಿದೆ.
ಈ ಕ್ರೀಡಾ ಮೈದಾನದಲ್ಲಿ ಕಳೆದ 20 ವರ್ಷಗಳ ಹಿಂದೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಪಂದ್ಯಾಟಗಳು ನಡೆದಿವೆ. ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ ಕೂಡಿಗೆಯ ಕ್ರೀಡಾಶಾಲೆಯ ವಿದ್ಯಾರ್ಥಿಗಳು ಹತ್ತು ವರ್ಷಗಳು ಹಾಕಿ, ಅಥ್ಲೆಟಿಕ್ ಹಾಗೂ ವಾಲಿಬಾಲ್ ಅಭ್ಯಾಸ ನಡೆಸಿದ ಈ ಕ್ರೀಡಾಂಗಣ ಇದೀಗ ಪಾಳುಬಿದ್ದ ಕ್ರೀಡಾಂಗಣವಾಗುತ್ತಿದೆ. ಇದರ ಬಗ್ಗೆ ಕ್ರೀಡಾ ಇಲಾಖೆ ಅಥವಾ ವಿವಿಧ ವಿದ್ಯಾಸಂಸ್ಥೆಗಳ ಅಧಿಕಾರಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಪ್ರಯತ್ನಿಸಿದ್ದಲ್ಲಿ ಮುಂದಿನ ಕ್ರೀಡಾಪಟುಗಳಿಗೆ ಉತ್ತಮವಾದ ಮೈದಾನ ಅಭ್ಯಾಸಕ್ಕೆ ದೊರಕಿದಂತಾಗುತ್ತದೆ. ಸ್ಥಳೀಯ ವಾಲಿಬಾಲ್ ಹಾಗೂ ಹಾಕಿ ಕ್ರೀಡಾಪಟುಗಳು ಮೈದಾನದ ಅಭಿವೃದ್ಧಿಗೆ ಸಂಬಂಧಪಟ್ಟ ಕ್ರೀಡಾ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ಮತ್ತು ಕ್ಷೇತ್ರದ ಶಾಸಕರಿಗೂ ಮನವಿ ಮಾಡಿದ್ದಾರೆ. ಸಂಬಂಧಪಟ್ಟವರು ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿ, ಪ್ರೇಕ್ಷಕರು ಕುಳಿತು ವೀಕ್ಷಿಸುವ ಗ್ಯಾಲರಿ ಮತ್ತು ಮಳೆಯಿಂದ ಕೊರೆತವುಂಟಾಗುವ ಸ್ಥಳವನ್ನು ಗುರುತಿಸಿ ಅದನ್ನು ಸರಿಪಡಿಸಲು ಮುಂದಾಗಬೇಕು ಎಂದು ಈ ವ್ಯಾಪ್ತಿಯ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.