ಮಡಿಕೇರಿ ಫೆ. 29: ಪ್ರಗತಿಪರ ಜನಾಂದೋಲನ ವೇದಿಕೆಯ ನೆಲ್ಲಿಹುದಿಕೇರಿ ಸ್ಥಾನೀಯ ಘಟಕದ ವತಿಯಿಂದ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಎಂಬ ಕರಾಳ ಕಾಯ್ದೆ ಮತ್ತು ಜನ ವಿರೋಧಿ ನೀತಿಗಳ ವಿರುದ್ಧ ಕೊಡಗಿನ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜನಾಂದೋಲನ ಚಳುವಳಿ ನಡೆಸುವುದರ ಭಾಗವಾಗಿ ನೆಲ್ಲಿಹುದಿಕೇರಿಯ ಸಮುದಾಯ ಭವನದಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಸಂವಿಧಾನ’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಿತು.

ಈ ಸಂದರ್ಭ ಕಾರ್ಮಿಕ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರ ಡಾ. ಕೆ. ಪ್ರಕಾಶ್, ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲ ಪ್ರೊ. ಕೆ. ಹರಿರಾಮ್ ವಿಚಾರಗಳನ್ನು ಮಂಡಿಸಿದರು. ಇದರ ಮುಂದುವರಿದ ಭಾಗವಾಗಿ ಪ್ರಗತಿಪರ ಜನಾಂದೋಲನ ವೇದಿಕೆಯ ನೆಲ್ಲಿಹುದಿಕೇರಿ ಸ್ಥಾನೀಯ ಘಟಕದ ವತಿಯಿಂದ ಮಾ. 1 ರಂದು (ಇಂದು) ನೆಲ್ಲಿಹುದಿಕೇರಿ ಸಮೀಪದ ನಲ್ವತ್ತೆಕ್ರೆ ಗ್ರಾಮದ ಸಮುದಾಯ ಭವನ(ಶಾದಿ ಮಹಲ್)ನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ.

ಅಂದು ಸಂಜೆ 6.30ಕ್ಕೆ ನಲ್ವತ್ತೆಕ್ರೆ ಮುಸ್ಲಿಂ ಜಮಾಅತ್ ಅಧ್ಯಕ್ಷ ಬೀರಾನ್ ಕುಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪ್ರಗತಿಪರ ಜನಾಂದೋಲನಾ ವೇದಿಕೆಯ ಜಿಲ್ಲಾ ಸಂಚಾಲಕ ವಿ.ಪಿ. ಶಶಿಧರ್ ಭಾಗವಹಿಸಲಿದ್ದಾರೆ.

ನೆರವಂಡ ಉಮೇಶ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಸಾಹಿತಿಗಳು ಮತ್ತು ಸಮಾಜ ಪರಿವರ್ತನಾ ಚಳುವಳಿ ಹೋರಾಟಗಾರ ಅತ್ರಾಡಿ ಅಮೃತ ಶೆಟ್ಟಿ ವಿಚಾರವನ್ನು ಮಂಡಿಸಲಿದ್ದಾರೆ. ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ವಕೀಲರು, ಮತ್ತು ನೋಟರಿ ಹಾಗೂ ಪ್ರಗತಿಪರ ಹೋರಾಟಗಾರ ಕುಂಞÂ ಅಬ್ದುಲ್ಲಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ. ಶಿಬಿರದಲ್ಲಿ ಕೊಡಗಿನ ಎಲ್ಲಾ ಪ್ರಗತಿಪರ ಮುಖಂಡರುಗಳು, ಹೋರಾಟಗಾರರು, ಸಂಘಟನೆಯ ನೇತಾರರು, ಬಿಜೆಪಿ ಹೊರತುಪಡಿಸಿ ಎಲ್ಲಾ ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಪ್ರಗತಿಪರ ಜನಾಂದೋಲನ ವೇದಿಕೆಯ ಸಹ ಸಂಚಾಲಕ ಪಿ.ಆರ್. ಭರತ್ ತಿಳಿಸಿದ್ದಾರೆ.