ಶ್ರೀಮಂಗಲ, ಫೆ. 27: ದ. ಕೊಡಗಿನ ವ್ಯಾಪ್ತಿಯಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಸರಕಾರದಿಂದ ಅಧಿಕೃತ ಅನುಮತಿ ದೊರೆತ್ತಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದರೂ ಹುಲಿಯ ಸುಳಿವು ಎಲ್ಲಿಯೂ ಪತ್ತೆಯಾಗಿಲ್ಲ.ಈಗಾಗಲೇ ಅರಣ್ಯ ಇಲಾಖೆ ಹುಲಿ ದಾಳಿ ನಡೆಸಿದ ಹರಿಹರ, ಟಿ.ಶೆಟ್ಟಿಗೇರಿ, ಬೆಳ್ಳೂರು ಗ್ರಾಮದಲ್ಲಿ ಬೋನ್ ಇರಿಸಿ ಹುಲಿ ಸೆರೆಗೆ ಕಾರ್ಯಪ್ರವೃತ್ತವಾಗಿದೆ. ಟಿ. ಶೆಟ್ಟಿಗೇರಿಯಲ್ಲಿ ಬೋನ್ ಇರಿಸಿ, ಹುಲಿಯನ್ನು ಸೆಳೆಯಲು ಬೋನಿನ ಒಳಗೆ (ಮೊದಲ ಪುಟದಿಂದ) ಜೀವಂತ ಹಂದಿ ಮರಿಯನ್ನು ಇರಿಸಲಾಗಿತ್ತಾದರೂ ಅತೀ ಚಳಿಯಿಂದ ಈ ಹಂದಿ ಮರಿ ಬುಧವಾರ ರಾತ್ರಿ ಸಾವನ್ನಪ್ಪಿದೆ.ಹರಿಹರ ಮತ್ತು ಬೆಳ್ಳೂರು ಗ್ರಾಮದಲ್ಲಿ ಪ್ರತ್ಯೇಕ ಬೋನ್ ಇರಿಸಿ ಹುಲಿ ದಾಳಿಯಿಂದ ಬಲಿಯಾಗಿರುವ ಜಾನುವಾರುವಿನ ಕಳೆಬರ ಇಟ್ಟು ಹುಲಿ ಸೆರೆಗೆ ಕಾರ್ಯತಂತ್ರ ರೂಪಿಸಲಾಗಿದೆ. ಮಂಗಳವಾರದಿಂದ ಹುಲಿ ಸೆರೆಗೆ ಕಾರ್ಯತಂತ್ರ ರೂಪಿಸಲಾಗಿದೆಯಾದರೂ ಹುಲಿಯ ಯಾವುದೆ ಸುಳಿವು ದೊರೆತಿಲ್ಲ. ಇರಿಸಿರುವ ಎಲ್ಲಾ ಬೋನ್‍ಗಳ ಸಮೀಪ ಹುಲಿಯ ಚಲನ-ವಲನ ಗುರುತಿಸಲು ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದೆ. ಆದರೆ, ಅಲ್ಲಿಗೆ ಹುಲಿ ಬಂದಿರುವ ಯಾವುದೇ ಕುರುಹು ಸೆರೆಯಾಗಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.ಹುಲಿಯ ಜಾಡು ಅರಿಯಲು ಟಿ. ಶೆಟ್ಟಿಗೇರಿ, ಬೆಳ್ಳೂರು ಮತ್ತು ಹರಿಹರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಕೊಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಇನ್ನೊಂದೆಡೆ ಹುಲಿಯ ಹೆಜ್ಜೆಗುರುತು ಪತ್ತೆ ಹಚ್ಚಲು ತಜ್ಞರು ಪ್ರಯತ್ನಿಸುತ್ತಿದ್ದು ಇದುವರೆಗೂ ಹುಲಿಯ ಹೆಜ್ಜೆ ಗುರುತಾಗಲಿ ಅಥವಾ ಹುಲಿಯನ್ನು ಪ್ರತ್ಯಕ್ಷವಾಗಿ ಕಂಡಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸ್ಥಳೀಯರು ಹುಲಿಯನ್ನು ಕಂಡರೆ ಕೂಡಲೇ ಅರಣ್ಯ ಇಲಾಖೆಗೆ ತಿಳಿಸುವಂತೆ ಕೋರಿದೆ.