ಮಡಿಕೇರಿ, ಫೆ.27 : ಪ್ರಾಕೃತಿಕ ವಿಕೋಪದ ಪರಿಹಾರ ವಿತರಣೆÉಯಲ್ಲಿ ಗೊಂದಲ ಮುಂದುವರೆದಿದ್ದು ಭಾರೀ ಮಳೆಯಿಂದ ಮನೆ ಕಳೆದುಕೊಂಡವರೊಬ್ಬರಿಗೆ ಬರಬೇಕಿದ್ದ ಪರಿಹಾರ ಮತ್ತೊಬ್ಬರ ಖಾತೆಗೆ ಜಮೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಕಷ್ಟದ ಸನ್ನಿವೇಶದ ಬಗ್ಗೆ ಮಾಹಿತಿ ನೀಡಿದ ನಗರದ ಇಂದಿರಾ ನಗರ ಬಡಾವಣೆಯ ನಿವಾಸಿ ನೂರಿ ಬಾಷ, 2018-19ನೇ ಸಾಲಿನ ಭಾರೀ ಮಳೆಯಿಂದ ತಮ್ಮ ಮನೆಗೆ ಅಪಾರ ಹಾನಿಯುಂಟಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಆರಂಭದಲ್ಲಿ 50 ಸಾವಿರ ರೂ. ಪರಿಹಾರ ಮೊತ್ತ ನಮಗೆ ಲಭ್ಯವಾಗಿತ್ತು. ಬಳಿಕ ಬರಬೇಕಿದ್ದ ಪರಿಹಾರ ಮತ್ತು ಬಾಡಿಗೆ ಹಣ ಮಾತ್ರ ಇಲ್ಲಿಯವರೆಗೂ ದೊರಕಿಲ್ಲವೆಂದು ಅಳಲು ತೋಡಿಕೊಂಡರು. ಸಂತ್ರಸ್ತರ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇದೆ, ಬ್ಯಾಂಕ್ ಖಾತೆಗೆ ಮಾಸಿಕ 10 ಸಾವಿರ ರೂ. ಬಾಡಿಗೆ ಹಣ ಪಾವತಿಯಾಗಬೇಕಿತ್ತಾದರೂ ಅದು ಪಾವತಿಯಾಗಿರಲಿಲ್ಲ. ಈ ಬಗ್ಗೆ ನಗರಸಭೆÉಯಲ್ಲಿ ವಿಚಾರಿಸಿದಾಗ, ನನ್ನ ಖಾತೆಗೆ ಬರಬೇಕಿದ್ದ ಬಾಡಿಗೆ ಹಣ ಸಂತ್ರಸ್ತರ ಪಟ್ಟಿಯಲ್ಲಿ ಇಲ್ಲದ ಇಂದಿರಾನಗರದ ನೂರ್ ಜಾನ್ ಪುಂಡಲಿ ಎಂಬವರ ಖಾತೆಗೆ ಜಮೆಯಾಗಿರುವುದು ತಿಳಿದು ಬಂದಿತ್ತು. ಅಂದಾಜು ನನ್ನ ಖಾತೆಗೆ ಬರಬೇಕಿದ್ದ 1.40 ಲಕ್ಷ ಬಾಡಿಗೆ ಹಣ ಬೇರೊಂದು ಖಾತೆಗೆ ವರ್ಗಾವಣೆಯಾಗುವ ಮೂಲಕ ತನಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ತಪ್ಪಾಗಿ ಬಾಡಿಗೆ ಹಣ ಬೇರೊಬ್ಬರ ಖಾತೆಗೆ ವರ್ಗಾವಣೆಯಾದ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆ ಸಂದರ್ಭ ನಗರಸಭಾ ಸಿಬ್ಬಂದಿಗಳಿಬ್ಬರು ನೂರ್ ಜಾನ್ ಪುಂಡಲಿ ಅವರು ನೀಡಿದ 45 ಸಾವಿರ ರೂ.ಗಳನ್ನು ತನಗೆ ನೀಡಿದ್ದು, ಬಾಕಿ 1 ಲಕ್ಷ ರೂ. ತಮಗೆ ಬರಬೇಕಿದೆ ಎಂದು ನೂರಿ ಬಾಷಾ ಮಾಹಿತಿ ನೀಡಿದರು.
ಪ್ರಾಕೃತಿಕ ವಿಕೋಪದಿಂದ ಮನೆಯನ್ನು ಕಳೆದುಕೊಂಡಿರುವ ತಾವು ತೀವ್ರ ಸಂಕಷ್ಟದಲ್ಲಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ ಅವರು, ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಬಳಿಯಲ್ಲೂ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೂರಿ ಬಾಷಾ ಅವರ ಪತಿ ಬಾಷಾ, ಸ್ಥಳೀಯ ನಿವಾಸಿಗಳಾದ ಆಫ್ರಿನ್ ಹಾಗೂ ಬಾಲಕೃಷ್ಣ ಉಪಸ್ಥಿತರಿದ್ದರು.