ಮಡಿಕೇರಿ, ಫೆ. 27: ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರಕ್ಕೆ ಸಂಬಂಧಿಸಿದ ನೂರಾರು ಎಕರೆ ಪ್ರದೇಶದಲ್ಲಿ, ಬೆಳೆದು ನಿಂತಿದ್ದ ಭಾರೀ ಗಾತ್ರ್ರದ ಸಿಲ್ವರ್ ಹಾಗೂ ಇತರ ಮರಗಳನ್ನು ಕಡಿದು ಉರುಳಿಸಿರುವ ದೃಶ್ಯ ಗೋಚರಿಸಿದೆ. ನಿಯಮ ಬಾಹಿರವಾಗಿ ಮರಗಳನ್ನು ಕಡಿದು ಮಧ್ಯವರ್ತಿಗಳಿಗೆ ಮಾರಾಟಗೊಳಿಸುವ ಮೂಲಕ ಸರಕಾರದ ಬೊಕ್ಕಸಕ್ಕೆ ವಂಚಿಸಿರುವ ಆರೋಪ ಕೇಳಿಬರತೊಡಗಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಯೊಂದಿಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಚೆಟ್ಟಳ್ಳಿ ಹಾಗೂ ಸುತ್ತಮುತ್ತಲಿನ ನಾಗರಿಕರು ಆಗ್ರಹಿಸಿದ್ದಾರೆ.

‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ಕಳೆದ ಸಾಲಿನ ಮಳೆಗಾಲಕ್ಕೆ ಮೊದಲು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಬಲಿತಿದ್ದ ಸುಮಾರು 300 ಸಿಲ್ವರ್ ಮರಗಳನ್ನು ಟೆಂಡರ್ ಮುಖಾಂತರ, ಪ್ರತಿ ಕ್ಯೂಬಿಕ್ ಅಡಿಯ ಘನ ಮರಕ್ಕೆ ರೂ. 22 ಸಾವಿರ ಮೌಲ್ಯದಂತೆ ವ್ಯಾಪಾರಿಯೊಬ್ಬರಿಗೆ ನೀಡಿದ್ದಾಗಿ ತಿಳಿದು ಬಂದಿದೆ. ಅಂತೆಯೇ ಸಂಬಂಧಿಸಿದವರು ಬೆಳೆದು ನಿಂತಿದ್ದ ಮರಗಳನ್ನು ಕಡಿದುರುಳಿಸಿ ಲೋಡುಗಟ್ಟಲೆ ಲಾರಿಗಳಲ್ಲಿ ಸಾಗಾಟಗೊಳಿಸಿದ್ದಲ್ಲದೆ, ಇಂತಹ ಮರಗಳ ರೆಂಬೆ, ಕೊಂಬೆಗಳನ್ನು ಪ್ರತ್ಯೇಕ ಸೌದೆ ತಯಾರಿಸಿ ಬೇರೆ ವ್ಯಕ್ತಿಯೊಬ್ಬರ ಮೂಲಕ ವ್ಯವಹಾರ ನಡೆಸಿರುವುದು ಬಹಿರಂಗಗೊಂಡಿದೆ.ಜಟಾಪಟಿ: ಈ ಹಂತದಲ್ಲಿ ಮರಗಳನ್ನು ಪಡೆದಿದ್ದ ವ್ಯಕ್ತಿ ನಿಯಮಬಾಹಿರವಾಗಿ, ತನಗೆ ಟೆಂಡರ್ ನೀಡಲಾಗಿದ್ದ ಸ್ವತ್ತಿಗಿಂತ ಅಧಿಕ ಪ್ರಮಾಣದಲ್ಲಿ ಮರಗಳನ್ನು ಕಡಿದು ಸಾಗಾಟಗೊಳಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂಶೋಧನಾ ಕೇಂದ್ರದ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿದ್ದ ವ್ಯಕ್ತಿ ನಡುವೆ ಜಟಾಪಟಿಯೊಂದಿಗೆ, ಆ ಬಳಿಕ ವ್ಯವಹಾರವೂ ಸ್ಥಗಿತಗೊಂಡಿದೆ.

ನೇರ ವಹಿವಾಟು: ಇದೀಗ ಕೆಲವು ಸಮಯದಿಂದ ಆ ವ್ಯಾಪಾರಿಯೊಂದಿಗೆ ಇತರರು ಜತೆಗೂಡಿ, ಚೆಟ್ಟಳ್ಳಿ ಕೇಂದ್ರದ ಮೇಲಧಿಕಾರಿಯೊಡನೆ ವ್ಯವಹಾರ ಕುದುರಿಸಿದ್ದು, ಯಾವದೇ ಟೆಂಡರ್ ಇತ್ಯಾದಿ ಅನುಸರಿಸದೆ, ಗಜಗಾತ್ರದ ಸಿಲ್ವರ್ ಮರಗಳೊಂದಿಗೆ, ಇತರ ಮರಗಳನ್ನು ಕೂಡ ಕಡಿದುರುಳಿಸಿ ಸಾಗಾಟಗೊಳಿಸುತ್ತಿರುವದು ಬೆಳಕಿಗೆ ಬಂದಿದೆ.