ಮಡಿಕೇರಿ, ಫೆ. 27: ದೇಯಿ ಬೈದೈತಿ, ಕೋಟಿ ಚೆನ್ನಯ್ಯ ಮೂಲ ಸ್ಥಾನವಾದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಒಡಗನ್ನೂರು ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತೆಲ್‍ನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮಡಿಕೇರಿ ತಾಲೂಕು ಬಿಲ್ಲವ ಸೇವಾ ಸಮಾಜದ ವತಿಯಿಂದ ಹೊರೆಕಾಣಿಕೆ ಹೊತ್ತ ವಾಹನಗಳು ಸಾಗಿದವು. ಮಡಿಕೇರಿ ತಾಲೂಕಿನ ಹದಿನೈದಕ್ಕೂ ಅಧಿಕ ಕಡೆಗಳಿಂದ ಹೊರೆಕಾಣಿಕೆಯೊಂದಿಗೆ ಸುಮಾರು 400 ಮಂದಿಯ ತಂಡ ತೆರಳಿತ್ತು.
ಮಡಿಕೇರಿ ತಾಲೂಕು ವ್ಯಾಪ್ತಿಯ ಬಿಲ್ಲವ ಸಮುದಾಯದವರು ತಮ್ಮಿಂದಾದಷ್ಟು ಅಕ್ಕಿ, ಬೆಲ್ಲ, ಸಕ್ಕರೆ, ತರಕಾರಿ, ಬಾಳೆಕಾಯಿ, ಎಣ್ಣೆ ಇನ್ನಿತರ ವಸ್ತುಗಳನ್ನು ಮಡಿಕೇರಿ ತಾಲೂಕು ಬಿಲ್ಲವ ಸೇವಾ ಸಮಾಜದ ಮೂಲಕ ಹೊರೆಕಾಣಿಕೆಯನ್ನು ಸಮರ್ಪಿಸಿ ಕಳುಹಿಸಿಕೊಟ್ಟರು. ಮಡಿಕೇರಿ ಪೇಟೆ ರಾಮಂದಿರದ ಬಳಿಯಿರುವ ಸಂಘದ ಕಚೇರಿ ಬಳಿ ಕಾರ್ಯಕಾರಿ ಸಮಿತಿಯ ಈರಪ್ಪ ಅವರು ಚಾಲನೆ ನೀಡಿದರು.
ಮಡಿಕೇರಿ ತಾಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷೆ ಬಿ.ಎಸ್. ಲೀಲಾವತಿ, ಕಾರ್ಯದರ್ಶಿ ಮನೋಹರ್, ಖಜಾಂಚಿ ಮಹೇಶ್, ಕಾರ್ಯಕಾರಿ ಸಮಿತಿಯ ಸುಜಾತ, ಪ್ರೇಮಾ, ರಮೇಶ್, ರಮೇಶ್ ಪೂಜಾರಿ ಮತ್ತಿತರರು ಇದ್ದರು.