ಸೋಮವಾರಪೇಟೆ, ಫೆ. 26: ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸಬಾರದು. ಸರ್ಕಾರಿ ಶಾಲೆಗಳಲ್ಲೂ ಇದೀಗ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರೂ. 10.3 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪೋಷಕರುಗಳಿಗೆ ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವನೆ ಇದ್ದು, ಆಂಗ್ಲ ಮಾಧ್ಯಮದ ಬಗ್ಗೆ ಹೆಚ್ಚಿನ ಒಲವು ಮೂಡುತ್ತಿದೆ. ಈ ಹಿನ್ನೆಲೆ ಪಟ್ಟಣದ ಜಿ.ಎಂ.ಪಿ. ಶಾಲೆಯಲ್ಲಿ ಈಗಾಗಲೇ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿಗಳನ್ನು ತೆರೆಯಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಅಣ್ಣಮ್ಮ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪೌಲೀನಾ ಸಿಕ್ವೇರ ಹಾಗೂ ಸಮಿತಿಯ ಸದಸ್ಯರು, ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
 
						