ಹೆಬ್ಬಾಲೆ, ಫೆ. 27: ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿ ಚುನಾವಣೆ ಸಂದರ್ಭ ಪಕ್ಷ ವಿರೋಧಿ ಕೆಲಸ ಮಾಡಿದ ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಮುಖಂಡ ಶ್ರೀನಿವಾಸ್ ಒತ್ತಾಯಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಿರಂಗಾಲ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಡಿಸಿಸಿ ಅಧ್ಯಕ್ಷರು ಹಾಗೂ ಮುಖಂಡರನ್ನು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಕಾರ್ಯಕರ್ತರಿಗೆ ಮನ್ನಣೆ ನೀಡಿ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದರು. ಅಡುಗೆ ಸಿಲಿಂಡರ್, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಜನಸಾಮಾನ್ಯರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜನಸಾಮಾನ್ಯರ ಹಾಗೂ ಬಡಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿದರು. ಕಾಂಗ್ರೆಸ್ ವಕ್ತಾರ ಟಿ.ಈ. ಸುರೇಶ್ ಮಾತನಾಡಿ, ಪಕ್ಷದ ಕಾರ್ಯಕರ್ತರು ತಮ್ಮ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಉಸ್ಮಾನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬೇಲಯ್ಯ. ಪಕ್ಷದ ಮುಖಂಡರಾದ ಗೀತಾ ಧರ್ಮಪ್ಪ, ಜನಾರ್ದನ್, ಕೆ.ಆರ್. ಹೂವಯ್ಯ, ಕಿರಣ್, ಶ್ರೀನಿವಾಸ್, ಕಿಶೋರ್, ಕಪ್ಪಣ್ಣ ಉಪಸ್ಥಿತರಿದ್ದರು.