*ಸಿದ್ದಾಪುರ, ಫೆ. 26: ಅಭ್ಯತ್ ಮಂಗಲ, ಒಂಟಿಯಂಗಡಿಯಿಂದ ವಾಲ್ನೂರು, ಅಮ್ಮಂಗಲದವರೆಗೆ ಇರುವ ನಾಲೆಯನ್ನು ಸಣ್ಣ ನೀರಾವರಿ ಇಲಾಖೆಯ ಅನುದಾನದಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ.
ಸುಮಾರು 12 ಕಿ.ಮೀ. ಉದ್ದದ ನಾಲೆ ಪ್ರತಿ ಮಳೆಗಾಲದಲ್ಲಿ ಹಾನಿಗೀಡಾಗುತ್ತಿತ್ತು. ಇದರಿಂದ ವಾಲ್ನೂರು-ತ್ಯಾಗತ್ತೂರು ಗ್ರಾಮಸ್ಥರು ಬೆಳೆ ಬೆಳೆಯಲು ಸಾಧ್ಯವಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದರು. ಆದರೆ ಇದೀಗ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸೂಚನೆಯಂತೆ ರೂ. 23 ಲಕ್ಷ ವೆಚ್ಚದಲ್ಲಿ ನಾಲೆಯನ್ನು ಪುನರ್ ನಿರ್ಮಿಸಲಾಗುತ್ತಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ಸಾಲಿನಲ್ಲಿ ಉತ್ತಮ ಬೆಳೆ ಬೆಳೆಯಬಹುದಾಗಿದೆ ಎಂದು ಗ್ರಾಮಸ್ಥರು ತೃಪ್ತಿ ವ್ಯಕ್ತಪಡಿಸಿದ್ದಾರೆ.