ವೀರಾಜಪೇಟೆ, ಫೆ. 26: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಯಿಂದ ದೂರ ಉಳಿಯುತ್ತಿರುವುದು ವಿಷಾದನೀಯ ಎಂದು ಪೊನ್ನಂಪೇಟೆಯ ಸಾಯಿ ಶಂಕರ್ ಕಾಲೇಜಿನ ಪ್ರಾಂಶುಪಾಲೆ ದಶಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಪೆÇೀಷಕರ ಒತ್ತಾಯಕ್ಕೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥಿರತೆಯನ್ನು ತರಲು ಕ್ರೀಡೆಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ತೋರಬೇಕು. ಸ್ವಾಸ್ತ್ಯ ಸಮಾಜದ ಸೃಷ್ಟಿಗೆ ಬಲಿಷ್ಠ ಯುವಕರ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮಗುರು ರೆ.ಫಾ. ರೋಷನ್ ಬಾಬು, ಐ.ಕ್ಯೂ.ಎ.ಸಿ. ಸಂಚಾಲಕಿ ತೃಪ್ತಿ ಬೋಪಣ್ಣ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ. ರಾಜ ರೈ, ವಿದ್ಯಾರ್ಥಿ ಪ್ರತಿನಿಧಿ ಮಾಚಯ್ಯ ಉಪಸ್ಥಿತರಿದ್ದರು.
ಈ ಸಂದರ್ಭ ಬಾಸ್ಕೆಟ್ ಬಾಲ್‍ನ ದಂತಕಥೆಯಾದಂತಹ ಕೋಬ್ ಬ್ರ್ಯಾಂಟ್ ಅವರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿ ಗೌರವವನ್ನು ಸಲ್ಲಿಸಲಾಯಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾಲೇಜನ್ನು ಪ್ರತಿನಿಧಿಸಿ ಸಾಧನೆಯನ್ನು ಮಾಡಿದಂತಹ ವಿದ್ಯಾರ್ಥಿಗಳನ್ನು ಮತ್ತು ಮುಖ್ಯ ಅತಿಥಿ ದಶಮಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಹುದಾ ನಿರೂಪಿಸಿದರು. ಡಯನ ಸ್ವಾಗತಿಸಿ, ದೃತಿ ವಂದಿಸಿದರು. ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ ಬಂದಂತಹ 11ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು.