ಮಡಿಕೇರಿ, ಫೆ. 27: ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಅಸಮರ್ಪಕ ನಿರ್ವಹಣೆ ಕಂಡುಬಂದಲ್ಲಿ ಅಂತಹ ಪಾಲನಾ ಕೇಂದ್ರಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಪೋಷಣೆ ಮತ್ತು ಪಾಲನೆಗೆ ಹೆಚ್ಚಿನ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಬಾಲ ನ್ಯಾಯ ಮಂಡಳಿ ಮುಂದೆ ಬಂದ ಪ್ರಕರಣಗಳ ವಿವರ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಪ್ರಕರಣಗಳ ವಿವರವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ಡಿ.ರವೀಂದ್ರ ಸಭೆಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ವಿಶೇಷ ಪಾಲನಾ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
2018-19ನೇ ಸಾಲಿನ ಪ್ರಾಯೋಜಿಕ ಕಾರ್ಯಕ್ರಮ ಪ್ರಗತಿ ವಿವರವನ್ನು ಸಭೆಗೆ ನೀಡಿ ಮಕ್ಕಳನ್ನು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣವನ್ನು ನೀಡುವುದರೊಂದಿಗೆ ವೈದ್ಯಕೀಯ ಚಿಕಿತ್ಸೆ, ಪೌಷ್ಟಿಕ ಆಹಾರ, ಹಾಗೂ ಇತರೆ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಜಾರಿ ಮಾಡಿದ್ದು, ಇದರಲ್ಲಿ 90 ಮಕ್ಕಳು ಇದರ ಸೌಲಭ್ಯವನ್ನು ಪಡೆಯುತ್ತಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸಿದ ತರಬೇತಿಗಳು ಹಾಗೂ ಅರಿವು ಕಾರ್ಯಕ್ರಮಗಳ ಕುರಿತು ಅರುಂಧತಿ ಅವರು ಮಾಹಿತಿ ನೀಡಿ ಒಟ್ಟು 18 ಕಾರ್ಯಾಗಾರ ನಡೆಸಿದ್ದು, 2,357 ಶಿಬಿರಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದು, ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಈ ಕಾರ್ಯಾಗಾರವನ್ನು ನಡೆಸಿರುವುದಾಗಿ ಅವರು ಮಾಹಿತಿ ನೀಡಿದರು.
ಮಮತೆಯ ತೊಟ್ಟಿಲು ಕಾರ್ಯಕ್ರಮದಡಿ ಅನಾಥವಾಗಿ ದೊರೆತಂತಹ ಮಕ್ಕಳಿಗೆ ಉತ್ತಮ ಬದುಕು ನೀಡುವ ಸಲುವಾಗಿ ಮಮತೆಯ ತೊಟ್ಟಿಲು ಯೋಜನೆಯಡಿ 2019 ಅಕ್ಟೋಬರ್‍ನಿಂದ ಡಿಸೆಂಬರ್ 2019 ರವರೆಗೆ ಎರಡು ಮಕ್ಕಳು ದೊರೆತಿದ್ದು, ಇವರನ್ನು ಜಿಲ್ಲಾಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿರುವುದಾಗಿ ತಿಳಿಸಿದರು.
ಪೋಷಕತ್ವ ಕಾರ್ಯಕ್ರಮದ ಪ್ರಗತಿ ವಿವರವನ್ನು ನೀಡಿ ಒಂದು ಗಂಡು ಮಗುವನ್ನು ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ನೀಡಿರುವುದಾಗಿ ಅವರು ತಿಳಿಸಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಮುಂದುವರೆದ ವೈದ್ಯಕೀಯ ಚಿಕಿತ್ಸೆ ಹಾಗೂ ಆರೋಗ್ಯ ಸುಧಾರಣೆಗಾಗಿ ವೈದ್ಯರ ಶಿಫಾರಸ್ಸಿನ ಅನ್ವಯ ತುರ್ತು ವೈದ್ಯಕೀಯ ಚಿಕಿತ್ಸೆ ಒಳಗೊಂಡಂತೆ ಗರಿಷ್ಠ ಒಂದು ಲಕ್ಷದ ವರೆಗೆ ಪರಿಹಾರ ನೀಡುವ ಅವಕಾಶವಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ಇದರಡಿ ಬಿಡುಗಡೆಯಾದ 12 ಲಕ್ಷ ಅನುದಾನದಲ್ಲಿ 46 ಸಂತ್ರಸ್ತ ಮಕ್ಕಳಿಗೆ 2.80 ಲಕ್ಷ ರೂ ಮೊತ್ತ ನೀಡಿರುವುದಾಗಿ ಅವರು ಮಾಹಿತಿ ನೀಡಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸೂರಜ್ ಮಾತನಾಡಿ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿದ ಸಂದರ್ಭ ಅಂತವರನ್ನು ಗುರುತಿಸಿ ನಿರ್ದಿಷ್ಟ ಕಾರಣವನ್ನು ಪತ್ತೆ ಹಚ್ಚಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಗೆ ಮಾಹಿತಿ ನೀಡಿದರು.
ಒಂದು ವೇಳೆ ಇಂತಹ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸುವಂತೆ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಕಾಲ ಕಾಲಕ್ಕೆ ಸಮಾಲೋಚಕರಿಂದ ಸಮಾಲೋಚನೆ ನಡೆಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಅರಿವು ನೀಡಿದಂತಾಗುತ್ತದೆ. ಇದರಿಂದ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಮಕ್ಕಳ ರಕ್ಷಣಾ ಘಟಕದ ಪೊಲೀಸ್ ಅಧಿಕಾರಿ ಸುಮತಿ ಅವರು ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಸಭೆಗೆ ತಿಳಿಸಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಆರ್‍ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ಮಕ್ಕಳ ರಕ್ಷಣಾ ಘಟಕದ ಮಂಜುನಾಥ್, ಚೈಲ್ಡ್ ಲೈನ್ ಸರ್ಕಾರೇತರ ಸಂಸ್ಥೆಯ ನವೀನ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಇತರರು ಇದ್ದರು.