ಮಡಿಕೇರಿ, ಫೆ. 27: ಎಲ್ಲಾ ದಾನಕ್ಕಿಂತ ಮಾನವನ ಪ್ರಾಣ ಉಳಿಸುವ ರಕ್ತ ದಾನವೇ ಅತ್ಯಂತ ಶ್ರೇಷ್ಠವಾದುದು. ಪ್ರಪಂಚದಲ್ಲಿ ಈವರೆಗಿನ ಅತಿ ದೊಡ್ಡ ಸಂಶೋಧನೆಯೆಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದು. ರಕ್ತದಾನ ಮಾಡುವುದರಿಂದ ಹಲವಾರು ಜನರು ಸಾವಿನಿಂದ ಪಾರಾಗಬಹುದು.

ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ಯಾವುದೇ ರೀತಿಯ ಪ್ರತಿಫಲವನ್ನು ಅಪೇಕ್ಷಿಸದೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಹಲವಾರು ಅಮಾಯಕ ಜೀವಗಳನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ರಕ್ತದಾನವು ಒಂದು ಮಾದರಿಯಾಗಿದೆ.

ಇದರನ್ವಯ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತ ವಿಧಳನ ಘಟಕವು ಈಗಾಗಲೇ ಹಲವಾರು ಜನೋಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವರ್ಷಕ್ಕೆ 50 ರಿಂದ 60 ರಕ್ತದಾನ ಶಿಬಿರವನ್ನು ಆಯೋಜಿಸಿ ರಕ್ತ ದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ. ರಕ್ತದ ಶೇಖರಣೆಯ ಘಟಕದ ಸೌಲಭ್ಯವು ಇರುವುದರಿಂದ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತವನ್ನು ನೀಡಲು ರಕ್ತನಿಧಿ ಕೇಂದ್ರವು ಸಹಕಾರಿಯಾಗಿದೆ.

ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಜಿಲ್ಲೆಯಲ್ಲಿ ತಿಂಗಳಿಗೆ 4 ಬಾರಿ ಆಯೋಜಿಸಲಾಗುತ್ತಿದ್ದು, ವರ್ಷಕ್ಕೆ ಅಂದಾಜು 1,800 ರಿಂದ 2000 ಜನರಿಂದ ರಕ್ತ ಸಂಗ್ರಹಿಸಲಾಗುತ್ತಿದೆ. ರಕ್ತವನ್ನು ಸಂಗ್ರಹಿಸಿದ ನಂತರ ಹಲವು ರೀತಿಯಾಗಿ ಬೇರ್ಪಡಿಸಿ ರೋಗಿಗಳ ಉಪಯೋಗಕ್ಕೆ ಬಳಸಲಾಗುತ್ತಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಕ್ತದ ಅಂಶಗಳನ್ನು 6 ರಿಂದ 8 ಗಂಟೆ ಒಳಗಾಗಿ ಬೇರ್ಪಡಿಸಬೇಕು. ನಂತರ ಕೆಂಪು ರಕ್ತ ಕಣವನ್ನು ಮತ್ತು ಪ್ಲೇಟ್ಲೆಟ್‍ಗಳನ್ನು 5 ದಿನಗಳವರೆಗೆ ಸಂಗ್ರಹಿಸಿಡಬಹುದು. ಪ್ಲಾಸ್ಮಾವನ್ನು 1 ವರ್ಷದವರೆಗೆ ಶೇಖರಿಸಿ ರೋಗಿಗಳಿಗೆ ನೀಡಬಹುದು. ಪ್ಲಾಸ್ಮಾವನ್ನು ರಕ್ತ ಹೆಪ್ಪುಗಟ್ಟುವ ಅಂಶ ಕಡಿಮೆ ಇದ್ದು ಹಿಮೋಫಿಲಿಯಾ ರೋಗದಿಂದ ಬಳಲುವ ಮಕ್ಕಳನ್ನು ಗುಣಪಡಿಸಲು ಬಳಸಲಾಗುತ್ತದೆ.

ಮಡಿಕೇರಿ ಜಿಲ್ಲಾಸ್ಪತ್ರೆಯಿಂದ ರಕ್ತವನ್ನು ಸಂಗ್ರಹಿಸಿ ಕುಶಾಲನಗರ, ಸೋಮವಾರಪೇಟೆ, ಗೋಣಿಕೊಪ್ಪ ಮತ್ತು ವೀರಾಜಪೇಟೆ ಆಸ್ಪತ್ರೆಯ ರಕ್ತ ಶೇಖರಣ ಘಟಕದಲ್ಲಿ ತುರ್ತು ಸಂದರ್ಭಕ್ಕೆಂದು ಶೇಖರಿಸಿಕೊಳ್ಳುವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಕಳೆದ 4 ತಿಂಗಳಿನಲ್ಲಿ ಜಿಲ್ಲೆಯಲ್ಲಿ ಅಂದಾಜು ಪೂರ್ಣ ರಕ್ತವನ್ನು 115 ಜನರಿಗೆ, ಪ್ಯಾಕ್ಟ್ ಕೆಂಪು ರಕ್ತ ಕಣ 526, ಫ್ರೇಶ್ ಫ್ರೋಸನ್ ಪ್ಲಾಸ್ಮ 9, ಪ್ಲೇಟ್ಲೆಟ್‍ನ್ನು 17 ಜನರಿಗೆ ನೀಡಲಾಗಿದ್ದು, ಒಟ್ಟಾರೆ 667 ಜನರ ಚಿಕಿತ್ಸೆಗೆ ದಾನಿಗಳಿಂದ ಪಡೆದ ರಕ್ತವನ್ನು ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಮಾಹಿತಿ ನೀಡಿದ್ದಾರೆ.