ಕೂಡಿಗೆ, ಫೆ. 25: ಸಮೀಪದ ರಂಗಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೇ ಸ್ವತಃ ರಚಿಸಿದ ‘ಹೂದುಂಬಿ’ ಕವನ ಸಂಕಲನವನ್ನು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಒಂದೊಂದು ಪ್ರತಿಭೆಗಳು ಅಡಗಿರುತ್ತವೆ. ಅದನ್ನು ಅನಾವರಣ ಗೊಳಿಸಲು ಸೂಕ್ತ ಮಾರ್ಗದರ್ಶನ ಮತ್ತು ವೇದಿಕೆ ಹಾಗೂ ಶಿಕ್ಷಕರ ಮಾರ್ಗದರ್ಶನ ಹಾಗೂ ಪ್ರಯತ್ನ ಮುಖ್ಯವಾಗಿದೆ. ಕವನ ಸಂಕಲನ ಬಿಡುಗಡೆಗೆ ರಂಗಸಮುದ್ರ ಶಾಲೆಯ ಶಿಕ್ಷಕರ ಪ್ರಯತ್ನ ಅಪಾರವಾಗಿದೆ. ವಿದ್ಯಾರ್ಥಿಗಳು ಸಾಹಿತಿಗಳ ಪುಸ್ತಕ ಗಳನ್ನು ಓದುವುದನ್ನು ರೂಢಿಸಿ ಕೊಂಡು, ಸಾಹಿತ್ಯದಲ್ಲಿ ತಮ್ಮನ್ನು ತೊಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸಾಹಿತ್ಯದಲ್ಲಿ ಅಭಿರುಚಿ ಮೂಡಿಸಿದಲ್ಲಿ ಮುಂದೆ ಸಾಹಿತಿಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ತಮ್ಮ ಜೀವನದ ಸರ್ವತೋಮುಖ ಬೆಳವಣಿಗೆಗೆ ಸಹ ಸಾಹಿತ್ಯ ಸಹಕಾರಿಯಾಗುತ್ತದೆ ಎಂದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್ ಮಾತನಾಡುತ್ತಾ, ಈ ರೀತಿಯ ವಿಭಿನ್ನ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ಉಳಿವಿಗೆ, ಬೆಳವಣಿಗೆಗೆ ಕಾರಣವಾಗು ತ್ತವೆ ಎಂದು ಶ್ಲಾಘಿಸಿದರು.
ಸಾಹಿತಿ ಫ್ಯಾನ್ಸಿಮುತ್ತಣ್ಣ ಮಾತನಾಡಿ, ರಂಗಸಮುದ್ರ ಶಾಲೆಯಲ್ಲಿಯೇ ಶಿಕ್ಷಕಿಯಾಗಿರುವ ಸುನೀತ ಅವರು ಸ್ವತಃ ಸಾಹಿತಿಗಳಾಗಿ ರುವುದರಿಂದ ಮಕ್ಕಳು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾ ಗಿದ್ದು, ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಕರು ನೀಡಿದ ಮಾರ್ಗದರ್ಶನದಲ್ಲಿಯೇ ನಡೆಯ ಬೇಕು ಎಂದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಉದಯವಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ. ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಬಿಆರ್‍ಪಿ ಹಾಗೂ ಸಿಆರ್‍ಪಿಗಳು, ಅಮ್ಮತ್ತಿ ಒಂಟಿಯಂಗಡಿ ಸಿಆರ್‍ಪಿ ಸುಷಾ, ಮುಖ್ಯೋಪಾಧ್ಯಾಯಿನಿ ಜಯಂತಿ, ಶಿಕ್ಷಕರಾದ ಸುನೀತ, ಉಷಾ ಪಿ.ಎಂ, ಸುಮಿತ್ರ ಪಿ.ಕೆ, ವೀಣಾ ಬಿ.ಎಸ್, ಜೆಶಿತ ಕೆ.ಆರ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.
ಇದೇ ಶಾಲೆಯ ವಿದ್ಯಾರ್ಥಿಗಳು ಈ ಹಿಂದೆ ಕನ್ನಡದಲ್ಲಿ ಪುಟಾಣಿ ರೆಕ್ಕೆಗಳು, ತುಂಬೆ, ನಿತ್ಯ ಪುಷ್ಪ, ಕಾಡುಮಲ್ಲಿಗೆ, ಇಂಗ್ಲೀಷ್‍ನ ಲಿಟಲ್ ಸ್ಟಾರ್ಸ್ ಹಾಗೂ ನಲಿಕಲಿ ವಾರ್ಷಿಕ ಪತ್ರಿಕೆ ಮುಂತಾದ ಪುಸ್ತಕಗಳನ್ನು ಅನಾವರಣ ಮಾಡುವ ಮುಖಾಂತರ ಇತರ ಶಾಲೆಗಳಿಗೆ ಮಾದರಿಯಾಗಿದ್ದು, ಈ ಬಾರಿಯೂ ಕೂಡಾ ವಿದ್ಯಾರ್ಥಿಗಳೇ ಸ್ವತಃ ಕವನಗಳನ್ನು ರಚಿಸಿ ಹೂದುಂಬಿ ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಿ ಗ್ರಾಮಸ್ಥರ, ಪೋಷಕರ ಮತ್ತು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
- ನಾಗರಾಜಶೆಟ್ಟಿ