ಕುಶಾಲನಗರ, ಫೆ. 25: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಸೋಮವಾರಪೇಟೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ಸದಾಶಿವಯ್ಯ ಎಸ್ ಪಲ್ಲೇದ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಕ್ರೀಡೆ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಸರಕಾರದಿಂದ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಲಭಿಸುತ್ತಿದ್ದು ಅತ್ಯುತ್ತಮ ಕ್ರೀಡಾಪಟುಗಳಾಗುವ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳುವುದರೊಂದಿಗೆ ಸೃಜನಶೀಲತೆ, ಮಾನವೀಯ ಗುಣಗಳನ್ನು ವೃದ್ದಿಸಿಕೊಳ್ಳಲು ಸಾಧ್ಯ. ಪಠ್ಯ ಚಟುವಟಿಕೆಗೆ ತೊಡಕಾಗದಂತೆ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಿರಿಯಾಪಟ್ಟಣ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಡಿ. ದೇವರಾಜ್ ಮಾತನಾಡಿ, ಪ್ರತಿಯೊಬ್ಬರೂ ಕೂಡ ಆರೋಗ್ಯವಂತ ಜೀವನಶೈಲಿ ರೂಪಿಸಿಕೊಳ್ಳಬೇಕಿದೆ. ಪ್ರತಿನಿತ್ಯದ ಒತ್ತಡ ಬದುಕಿನ ಜಂಜಾಟದಿಂದ ಹೊರಬರಲು ಕ್ರೀಡೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿದಾಗ ಮಾತ್ರ ಕ್ರೀಡೆಯಲ್ಲಿ ನಿಶ್ಚಿತ ಗುರಿ ಮುಟ್ಟಲು ಸಾಧ್ಯ ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಐ.ಕೆ. ಪೂವಮ್ಮ ಕ್ರೀಡಾಕೂಟ ಆಯೋಜನೆ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪಪಂ ಸದಸ್ಯ ಅಮೃತ್‍ರಾಜ್ ಮಾತನಾಡಿದರು. ಕಾಲೇಜಿಗೆ ಕುಡಿಯುವ ನೀರಿನ ಘಟಕ ಕೊಡುಗೆ ನೀಡಿದ ಕುಶಾಲನಗರ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣಮೂರ್ತಿ, ಸದಾಶಿವಯ್ಯ ಪಲ್ಲೇದ್ ಮತ್ತು ಡಾ. ಡಿ. ದೇವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹರ್ಷ ಸೇರಿದಂತೆ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಾದ ಜ್ಯೋತಿ ಪ್ರಾರ್ಥಿಸಿದರು, ಇಂದುದೇವಿ ಸ್ವಾಗತಿಸಿದರು, ನೆದಿರ ನಿರೂಪಿಸಿದರು.