ಸುಂಟಿಕೊಪ್ಪ, ಫೆ. 25: ಮಾದಾಪುರ ಗ್ರಾಮ ಪಂಚಾಯಿತಿಗೆ ದಶಕಗಳಿಂದ ಕಸವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಸಮಸ್ಯೆ ಕಾಡಿದ್ದು, ಇದೀಗ ಮೂವತ್ತೊಕ್ಲುವಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು 3 ಎಕ್ರೆ ಜಾಗ ಗುರುತಿಸಲಾಗಿದೆ. ಪಂಚಾಯಿತಿ ಖಾತೆಗೆ ಆರ್‍ಟಿಸಿ ವರ್ಗಾವಣೆಯಾಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪಿಡಿಓ ಪೂರ್ಣಕುಮಾರ್ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಸೂಚನೆಯಂತೆ ಎಲ್ಲಾ ಪಂಚಾಯಿತಿಯಲ್ಲೂ ಕಸವಿಲೇವಾರಿ ಹಾಗೂ ಸ್ಮಶಾನ ಜಾಗವನ್ನು ಗುರುತಿಸಿ ಕಸವಿಲೇವಾರಿ ಘಟಕ, ಕಸ ತ್ಯಾಜ್ಯವನ್ನು ಕೊಂಡೊಯ್ಯಲು ಗೂಡ್ಸ್‍ಆಟೋ, ಟಿಪ್ಪರ್ ಖರೀದಿಸಲು ಹಣವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸ್ವಚ್ಛತಾ ಆದ್ಯತೆ ಅನುಸಾರ ಮೀಸಲಿಟ್ಟಿದೆ. ಆದರೆ ಮಾದಾಪುರ ಪಂಚಾಯಿತಿಯಲ್ಲಿ ಕಸವಿಲೇವಾರಿ ಸಮಸ್ಯೆ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರಲ್ಲ ಎಂದು ಪತ್ರಿಕಾ ಪ್ರತಿನಿಧಿ ಪ್ರಶ್ನಿಸಿದಾಗ.

ಪಿಡಿಓ ಪೂರ್ಣಕುಮಾರ್, ತಾನು ಅಧಿಕಾರ ವಹಿಸಿಕೊಂಡ ನಂತರ ಆಡಳಿತ ಮಂಡಳಿಯವರ ಸಹಕಾರದಿಂದ ಕಸವಿಲೇವಾರಿ ಘಟಕಕ್ಕೆ ಮೂವತ್ತೊಕ್ಲುವಿನ ಸರ್ವೆ ನಂ1/17 ರಲ್ಲಿ 3 ಎಕ್ರೆ ಸರಕಾರಿ ಜಾಗ ಗುರುತಿಸಲಾಗಿದೆ. ಸ್ಮಶಾನಕ್ಕೆ ಸರ್ವೆ 1/17 ರಲ್ಲಿ 2 ಎಕ್ರೆ ಜಾಗ ಹಾಗೂ 7 ಎಕ್ರೆ ಜಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಜಿಲ್ಲಾಡಳಿತದಿಂದ ನೀಡಲು ಈಗಾಗಲೇ ಸರ್ವೆಕಾರ್ಯ ನಡೆಸಲಾಗಿದೆ. ಈ ಸಂಬಂಧ ಕಡತ ಸೋಮವಾರಪೇಟೆ ತಹಶೀಲ್ದಾರರ ಸುರ್ಪದಿಯಲ್ಲಿದ್ದು ಶೀಘ್ರದಲ್ಲೇ ಮಾದಾಪುರ ಪಂಚಾಯಿತಿ ಖಾತೆಗೆ ಆರ್‍ಟಿಸಿ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು. ಈಗಾಗಲೇ ಗ್ರಾಮ ಪಂಚಾಯಿತಿಗೆ ಒಣಕಸ ವಿಲೇವಾರಿಗೆ ಮಾಡಲು, ವಾಹನ ಖರೀದಿಸಲು ರೂ. 7.30 ಲಕ್ಷ ಬಂದಿದೆ. ಅಲ್ಲದೆ ಕಸವಿಲೇವಾರಿ ಘಟಕದ ಕಾಮಗಾರಿಗೆ ರೂ. 9.5 ಲಕ್ಷ ಬಿಡುಗಡೆಗೆ ಅನುಮೋದನೆ ಸಿಕ್ಕಿದೆ ಎಂದೂ ಪಿಡಿಓ ತಿಳಿಸಿದರು.