ಮಡಿಕೇರಿ, ಫೆ. 24: ವಿದ್ಯಾರ್ಥಿ ಜೀವನದ ಮಹತ್ವದ ಮೈಲಿಗಲ್ಲಾಗಿರುವ ಪ್ರೌಢಶಾಲಾ ವಿಭಾಗದ ಶಿಕ್ಷಣ ಹಲವು ಸಮಸ್ಯೆಗಳ ನಡುವೆ ಮುಂದುವರಿಯುತ್ತಿದೆ. ಪ್ರೌಢಶಿಕ್ಷಣದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಮಹತ್ವದ್ದಾಗಿದ್ದು; ಇನ್ನೇನು ವಾರ್ಷಿಕ ಪರೀಕ್ಷೆ ಎದುರಾಗುವ ಹಂತ ತಲುಪಿದೆ. ಪ್ರಸ್ತುತ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು; ಜಿಲ್ಲೆಯ ಕೆಲವು ಸರಕಾರಿ; ಅನುದಾನಿತ ಶಾಲೆಗಳಲ್ಲಿ ಪ್ರಮುಖ ವಿಷಯಗಳ ಶಿಕ್ಷಕರ ಕೊರತೆ ಇದ್ದು; ಇದನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆಯೇ ವಿನಹಃ ಕೊರತೆ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡುವತ್ತ ಶಿಕ್ಷಣ ಇಲಾಖೆ ಜಿಲ್ಲೆಯನ್ನು ಕಡೆಗಣಿಸಿದಂತಿದೆ ಎಂದು ಹಲವು ಶಾಲಾಭಿವೃದ್ಧಿ ಸಮಿತಿಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪ್ರೌಢಶಾಲೆಗಳಲ್ಲಿ ಪ್ರಮುಖವಾಗಿ ಶಿಕ್ಷಕರ ಅದರಲ್ಲೂ ಗಣಿತ, ವಿಜ್ಞಾನ ಹಾಗೂ ಆಂಗ್ಲಭಾಷಾ ಶಿಕ್ಷಕರ ಸಂಖ್ಯೆ ಕಡಿಮೆ ಇದೆ ಎನ್ನಲಾಗಿದೆ. ಕಳೆದ ಹಲವು ತಿಂಗಳ ಹಿಂದೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಾಗಿದ್ದು; ಪ್ರೌಢಾಶಾಲಾ ವಿಭಾಗದ 26 ಶಿಕ್ಷಕರು ಕೊಡಗು ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗವಾಗಿರುವದಾಗಿ ತಿಳಿದು ಬಂದಿದೆ. ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಈ ವರ್ಗಾವಣೆ ನಡೆದಿದ್ದು; 26 ಶಿಕ್ಷಕರು ಹೊರ ಜಿಲ್ಲೆಗಳ ಶಾಲೆಗಳಿಗೆ ನಿಯೋಜಿತರಾಗಿ ತೆರಳಿದ್ದರೆ; ಇಲ್ಲಿ ಖಾಲಿಯಾದ ಸ್ಥಾನಕ್ಕೆ ಬಂದಿರುವದು ಕೇವಲ ಇಬ್ಬರು ಶಿಕ್ಷಕರು ಮಾತ್ರವಂತೆ.ಇದರಿಂದಾಗಿ ಹಲವು ಶಾಲೆಗಳಲ್ಲಿ ಸಮಸ್ಯೆಗಳಿವೆ. ಆದರೆ ಇದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಂದಾಣಿಕೆ ಮೂಲಕ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ನಡೆಸಿದೆ. ಪ್ರಸ್ತುತ ಎಸ್ಎಸ್ಎಲ್ಸಿ ಪರೀಕ್ಷೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಶಿಕ್ಷಕರನ್ನು ಅಕ್ಕ-ಪಕ್ಕದ ಶಾಲೆಗಳಿಗೆ ಇಂತಿಷ್ಟು ದಿನ ಎಂದು ನಿಯೋಜಿಸಲಾಗಿದೆ. ಪೂರ್ಣಪ್ರಮಾಣದಲ್ಲಿ ಆಯಾ ಶಾಲೆಯಲ್ಲಿ ಶಿಕ್ಷಕರು ಇಲ್ಲದ ಕಾರಣ ಇದು ಶಿಕ್ಷಕರಿಗೆ ಮಾತ್ರವಲ್ಲ; ವಿದ್ಯಾರ್ಥಿಗಳಿಗೂ ಹೊರೆಯಾಗುತ್ತಿದೆ. ಹತ್ತನೇ ತರಗತಿ ಮಾತ್ರವಲ್ಲ ಎಂಟು, ಒಂಭತ್ತನೇ ತರಗತಿಯನ್ನೂ ಇವರು ನಿರ್ವಹಿಸಬೇಕಿದೆ ಎಂದು ಕೆಲವು ಮಂದಿ ಪೋಷಕರು ಹೇಳುತ್ತಿದ್ದಾರೆ.
ಕೆಲವು ಶಾಲೆಗಳಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 6ರ ತನಕ ತರಗತಿ ನಡೆಸಲಾಗುತ್ತಿದೆ. ಇನ್ನು ಹಲವು ಶಾಲೆಗಳಲ್ಲಿ ರಾತ್ರಿ ವಿದ್ಯಾರ್ಥಿಗಳನ್ನು ಉಳಿಸಿಕೊಂಡು ಪಾಠ ಹೇಳಿಕೊಡುವ ಪ್ರಯತ್ನವೂ ನಡೆಯುತ್ತಿದೆ. ಪೂರ್ಣ ಪ್ರಮಾಣದ ಶಿಕ್ಷಕರು ಇಲ್ಲದ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಪರೀಕ್ಷೆ ಎದುರಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಇಲಾಖಾ ಉಪನಿರ್ದೇಶಕ ಮಚ್ಚಾಡೋ ಅವರು ತಿಳಿಸಿದ್ದಾರೆ. ಇಲಾಖೆಯ ಅಧಿಕಾರಿಗಳು ವ್ಯವಸ್ಥೆಯನ್ನು ಸರಿಪಡಿಸಿ ಸೂಕ್ತ ರೀತಿಯಲ್ಲಿ ಪಠ್ಯಬೋಧನೆ ಮಾಡಲಾಗುತ್ತಿದೆ ಎಂದು ಸಮರ್ಥಿಸಿ ಕೊಳ್ಳುತ್ತರಾದರೂ ವಾಸ್ತವವಾಗಿ ಸಮಸ್ಯೆಗಳಿರುವದು ಒಪ್ಪಬೇಕಾದ ಅಂಶವಾಗಿದೆ. ಕೆಲವು ಪ್ರಮುಖವಾದ ಶಾಲೆಗಳು ಅಂದರೆ ವಿದ್ಯಾರ್ಥಿಗಳು ಹೆಚ್ಚಿರುವಂತಹ ಶಾಲೆಗಳಲ್ಲಿ ಶಿಕ್ಷಕರೊಂದಿಗೆ;
(ಮೊದಲ ಪುಟದಿಂದ) ಇನ್ನಿತರ ಹುದ್ದೆಗಳೂ ಖಾಲಿ ಇರುವದರಿಂದ ಇರುವ ಶಿಕ್ಷಕರು, ಮುಖ್ಯ ಶಿಕ್ಷಕರು ಹೆಚ್ಚಿನ ಹೊರೆ ನಿಭಾಯಿಸಬೇಕಾಗಿದೆ. ಆಡಳಿತ ವಿಚಾರ, ಕ್ಲರಿಕಲ್ ವ್ಯವಸ್ಥೆ, ಅಕ್ಷರ ದಾಸೋಹ, ಎನ್ಸಿಸಿ ಕ್ರೀಡೆ ಮತ್ತಿತರ ಯೋಜನೆಗಳ ಉಸ್ತುವಾರಿಯನ್ನೂ ಇರುವವರು ನಿಭಾಯಿಸಬೇಕಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ನಿರಂತರವಾಗಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಲೂ ಹಲವು ಸಮಸ್ಯೆಗಳು ಉಂಟಾಗಿರುವದನ್ನು ಇಲ್ಲಿ ಗಮನಿಸಬೇಕಾಗಿದೆ. ಜಿಲ್ಲೆಯಲ್ಲಿರುವ ಶಿಕ್ಷಕರು ಹೊರ ಜಿಲ್ಲೆಗಳಿಗೆ ತೆರಳುವತ್ತ ತೋರುತ್ತಿರುವ ಆಸಕ್ತಿಯನ್ನು ಜಿಲ್ಲೆಯ ಬೇರೆಡೆಯಿಂದ ಬರಲು ಇತರ ಶಿಕ್ಷಕರು ತೋರುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ವಾಸ್ತವತೆಯನ್ನು ಅರಿತಿರುವ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಸಚಿವರು ಗಮನ ಹರಿಸಬೇಕಾಗಿದೆ. ಇಲ್ಲದಿದ್ದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವದಾಗಿ ಹಲವು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.