ಸೋಮವಾರಪೇಟೆ, ಫೆ. 23: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ, ಆಲೂರುಸಿದ್ದಾಪುರದ ಅರೆಭಾಷೆ ಗೌಡ ಸಮಾಜದ ಸಹಭಾಗಿತ್ವದಲ್ಲಿ ತಾಲೂಕಿನ ಸಂಗಯ್ಯನಪುರದಲ್ಲಿ ಆಯೋಜಿಸಲಾಗಿದ್ದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನವು ಗ್ರಾಮದಲ್ಲಿ ಹಬ್ಬದ ಸಂಭ್ರಮಕ್ಕೆ ವೇದಿಕೆಯಾಯಿತು.
ಸಮ್ಮೇಳನದ ಅಂಗವಾಗಿ ಸಂಗಯ್ಯನಪುರದ ಗ್ರಾಮ ದೇವಾಲಯದಿಂದ ಹೊರಟ ಮೆರವಣಿಗೆ, ಅರೆಭಾಷೆ ಗೌಡ ಸಮುದಾಯದ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಬಿಂಬಿಸಿತು. ಸಮುದಾಯದ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ವಯೋವೃದ್ದರಾದಿಯಾಗಿ ಸಾವಿರಾರು ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯದ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.
ಸಂಗಯ್ಯನಪುರ ಗ್ರಾಮದೇವತೆ ದೇವಾಲಯದಿಂದ ಸಮ್ಮೇಳನ ನಡೆಯುವ ಸ್ಥಳದವರೆಗೂ ತಳಿರುತೋರಣ, ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು. ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಹೊದ್ದೆಟ್ಟಿ ಭವಾನಿಶಂಕರ್ ಅವರ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಅರೆಭಾಷೆ ಗೌಡ ಸಮಾಜದ ಪ್ರಮುಖರು ಇದ್ದರು.
ಮೆರವಣಿಗೆಯಲ್ಲಿ ಅರೆಭಾಷೆ ಗೌಡ ಜನಾಂಗದ ಸಾಂಪ್ರದಾಯಕ ಉಡುಗೆ ತೊಟ್ಟ ಮಹಿಳೆಯರು 102 ಕ್ಕಿಂತ ಹೆಚ್ಚಿನ ಕಳಸಹೊತ್ತು ಮೆರಗು ತಂದರು. ಸಾಂಪ್ರದಾಯಕ ಕುಪ್ಪಸ ತಟ್ಟಿ, ಪೀಚೆಕತ್ತಿ ತಲೆಗೆ ಪೇಟ ಧರಿಸಿದ ಪುರುಷರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಸಾಂಪ್ರದಾಯಿಕ ವಾದ್ಯಗೋಷ್ಠಿ, ಅರೆಭಾಷೆ ಗೌಡ ಜನಾಂಗದವರ ಮೆರವಣಿಗೆಯಲ್ಲಿ ಗಮನಸೆಳೆಯಿತು. ನಿವೃತ್ತ ತಾ.ಪಂ. ವಿಸ್ತರಣಾಧಿಕಾರಿ ಕೆದಂಬಾಡಿ ಈರಪ್ಪ ಮೆರವಣಿಗೆಗೆ ಚಾಲನೆ ನೀಡಿದರು.
ಸಮ್ಮೇಳನದ ಸಭಾ ವೇದಿಕೆಯ ಪ್ರವೇಶದ್ವಾರದಲ್ಲಿ ನಿರ್ಮಿಸಲಾಗಿದ್ದ ಸ್ವತಂತ್ರ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡ ಮುಖ್ಯದ್ವಾರವನ್ನು ಅರಕಲಗೂಡು ಸರಕಾರಿ ಪ.ಪೂ.ಕಾಲೇಜು ಪ್ರಾಂಶುಪಾಲ ಹುಲಿಮನೆ ಮಾದಪ್ಪ ಉದ್ಘಾಟಿಸಿದರು. ವಸ್ತುಪ್ರದರ್ಶನ ಮಳಿಗೆಯನ್ನು ತಾ.ಪಂ.ಸದಸ್ಯೆ ಬಟ್ಯನ ಸವಿತ ಈರಪ್ಪ ಉದ್ಘಾಟಿಸಿದರು. ಪುಸ್ತಕ ಮಳಿಗೆಯನ್ನು ತಾ.ಪಂ.ಸದಸ್ಯೆ ಲೀಲಾವತಿ ಮಹೇಶ್ ಉದ್ಘಾಟಿಸಿದರು.
ಕೊಡಗು ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಹಾಸನ, ಮಂಗಳೂರು ಭಾಗದ ಅರೆಭಾಷೆ ಗೌಡ ಸಮುದಾಯದ ಪ್ರಮುಖರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆಲೂರು ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಹೆಚ್ಚಾಗಿ ನೆಲೆಸಿರುವ ಅರೆಭಾಷೆ ಸಮುದಾಯದವರು ಸಮ್ಮೇಳನದಲ್ಲಿ ಭಾಗಿಯಾಗಿದ್ದರು.
ಆಕರ್ಷಿಸಿದ ವಸ್ತು ಪ್ರದರ್ಶನ: ಸಮ್ಮೇಳನದ ಅಂಗವಾಗಿ ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಬಹುತೇಕ ಕಣ್ಮರೆಯಾಗುತ್ತಿರುವ ಹಲವಷ್ಟು ವಸ್ತುಗಳು ಸಮ್ಮೇಳನದಲ್ಲಿ ಕಂಡುಬಂದವು.
ಅರೆಭಾಷೆ ಗೌಡ ಜನಾಂಗದ ಸಾಂಪ್ರದಾಯಕ ವಸ್ತುಗಳು, ಹಳೆಯ ಅಡುಗೆ ಪಾತ್ರೆಗಳು, ರೈತ ಉಪಯೋಗಿ ವಸ್ತುಗಳು, ಹಳೆ ಕಾಲದ ತೊಟ್ಟಿಲು, ದಿನ ಉಪಯೋಗಿ ವಸ್ತುಗಳು, ಭತ್ತ ಧಾನ್ಯವನ್ನು ಅಳೆಯುವ ಅಳತೆಗೋಲುಗಳು, ಬೀಸುವಕಲ್ಲು, ಅರೆಯುವಕಲ್ಲು, ಮೀನು ಹಿಡಿಯುವ ಬುಟ್ಟಿ ಸೇರಿದಂತೆ ಇತರ ಪರಿಕರಗಳು ಎಲ್ಲರನ್ನೂ ಆಕರ್ಷಿಸಿತು.
ಚಿತ್ರಕಲಾ ಪ್ರದರ್ಶನ: ಮಂಗಳೂರು ಮಹಾಲಸ ಕಾಲೇಜ್ ಆಪ್ ವಿಷ್ಯುವಲ್ ಆರ್ಟ್ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ವಿವಿಧ ಕಲಾಕೃತಿ ಗಳನ್ನು ಚಿತ್ರಕಲಾ ಪ್ರದರ್ಶನದಲ್ಲಿ ನೋಡುಗರ ಗಮನ ಸೆಳೆಯಿತು. ಪುಸ್ತಕ ಮಳಿಗೆಯಲ್ಲಿ ಅರೆಭಾಷೆ ಮತ್ತು ಕನ್ನಡದ ಹಿರಿಯ ಸಾಹಿತಿಗಳು, ಲೇಖಕರ ಪುಸ್ತಕಗಳು ಪ್ರದರ್ಶನಗೊಂಡು ಸಾಹಿತ್ಯಾಭಿಮಾನಿಗಳನ್ನು ಆಕರ್ಷಿಸಿತು.
ಊರುಬೈಲು ಲೋಕೇಶ್ ಅವರ ತಂಡದಿಂದ ಮೂಡಿಬಂದ ಸಿರಿ ಸುಗ್ಗಿ ಕಾರ್ಯಕ್ರಮದಲ್ಲಿ ಅರೆಭಾಷೆಯ ಹಾಡುಗಳು, ಸೋಬಾನೆ ಪದಗಳು ಕೇಳುಗರ ಕಿವಿಯನ್ನು ಇಂಪಾಗಿಸಿತು.
ಸಮ್ಮೇಳನದ ಧ್ವಜಾರೋಹಣವನ್ನು ಗಣಗೂರು ಗ್ರಾ.ಪಂ.ಅಧ್ಯಕ್ಷೆ ಸವಿತ ಸುಕುಮಾರ್, ಸಮ್ಮೇಳನದ ಧ್ವಜಾರೋಹಣವನ್ನು ಹಿರಿಯ ಮುಖಂಡ ಕೀಜನ ನಾಣಯ್ಯ ನೆರವೇರಿಸಿದರು.
ಪುಸ್ತಕ-ಸ್ಮರಣ ಸಂಚಿಕೆ ಬಿಡುಗಡೆ
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಆಲೂರು ಸಿದ್ದಾಪುರದ ಅರೆಭಾಷೆ ಗೌಡ ಸಮಾಜ, ಅರೆಭಾಷೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಆಶ್ರಯದಲ್ಲಿ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಸಂಗಯ್ಯನಪುರದಲ್ಲಿ ಆಯೋಜಿಸಿದ್ದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಮೂವರು ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಎನ್.ಜಿ. ಕಾವೇರಮ್ಮ ಅವರು ರಚಿಸಿರುವ, ಅರೆಭಾಷೆಯಲ್ಲಿ ಪ್ರಕಟವಾಗಿ ರುವ ‘ಪುಂಸ್ತ್ರೀ’ ಕಾದಂಬರಿ, ಸಂಗೀತ ರವಿರಾಜ್ ಅವರು ರಚಿಸಿರುವ ‘ಕಲ್ಯಾಣಸ್ವಾಮಿ’ ಕಾದಂಬರಿ, ಕಟ್ರತನ ಲಲಿತಾ ಅಯ್ಯಣ್ಣ ಅವರು ಬರೆದಿರುವ ‘ಅಪೂರ್ವ ಸಂಗಮ’-ಅರೆಭಾಷೆ ಕಥಾ ಸಂಕಲನವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಬಿಡುಗಡೆ ಮಾಡಿದರು.
ಸಮ್ಮೇಳನದ ಅಂಗವಾಗಿ ಹೊರತಂದಿರುವ ‘ಐಂಬರ’ ಸ್ಮರಣ ಸಂಚಿಕೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಬಿಡುಗಡೆ ಮಾಡಿದರು. ಕಳೆದ 8 ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಅರೆಭಾಷೆ ತ್ರೈಮಾಸಿಕ ಪತ್ರಿಕೆ ‘ಹಿಂಗಾರ’ವನ್ನು ಮತ್ತೆ ಚಾಲ್ತಿಗೆ ತಂದಿದ್ದು, ಇದನ್ನು ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಮ್ಮೇಳನಾಧ್ಯಕ್ಷ ಭವಾನಿ ಶಂಕರ್ ಸೇರಿದಂತೆ ಪ್ರಮುಖರು ಬಿಡುಗಡೆ ಮಾಡಿದರು.