ಗೋಣಿಕೊಪ್ಪ ವರದಿ, ಫೆ. 24: ಪರಿಶಿಷ್ಠ ಜಾತಿ, ಪಂಗಡ, ಅಲ್ಪಸಂಖ್ಯಾತ ಮತ್ತು ಒಬಿಸಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ರದ್ದು ಮಾಡದಂತೆ ಆಗ್ರಹಿಸಿ ತಿತಿಮತಿಯಲ್ಲಿ ತಿತಿಮತಿ ಪ್ರಗತಿಪರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ, ಸ್ಥಳೀಯ ಅರಣ್ಯ ಹಕ್ಕು ಹೋರಾಟ ಸಮಿತಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಚೈನ್ಗೇಟ್ನಿಂದ ತಿತಿಮತಿ ಪಟ್ಟಣದವರೆಗೆ ಮೆರವಣಿಗೆ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಿದರು. ಸಮಯಕ್ಕೆ ಸರಿಯಾಗಿ ಐಟಿಡಿಪಿ ಅಧಿಕಾರಿ ಮನವಿ ಸ್ವೀಕರಿಸಲು ಆಗಮಿಸಿಲ್ಲ ಎಂಬ ಕಾರಣಕ್ಕೆ 1 ಗಂಟೆಗಳ ಕಾಲ ತಿತಿಮತಿ ಪಟ್ಟಣವನ್ನು ಬಂದ್ ಮಾಡಲಾಯಿತು. 15 ನಿಮಿಷ ಹೆದ್ದಾರಿ ಬಂದ್ ಮಾಡಲಾಯಿತು. ಸ್ಥಳಿಯ ವರ್ತಕರು ಬೆಂಬಲ ಸೂಚಿಸಿದರು.
ಐಟಿಡಿಪಿ ಅಧಿಕಾರಿ ಶಿವಕುಮಾರ್ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಅರ್. ಪಂಕಜ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್, ವಿಭಾಗೀಯ ಸಂಚಾಲಕ ಕೃಷ್ಣಪ್ಪ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರೆಹಮನ್ ಬಾಪು, ಎಸ್ಟಿ ಘಟಕ ಅಧ್ಯಕ್ಷ ಮಣಿಕುಂಞ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ರಾಮು, ಪ್ರಮುಖರಾದ ಸಮ್ಮದ್ ಉಪಸ್ಥಿತರಿದ್ದರು.