ಮಡಿಕೇರಿ, ಫೆ. 24: ಸಾರ್ವಜನಿಕ ಶಿಕ್ಷಣ ಇಲಾಖೆ, ಚೇರಂಬಾಣೆ ಕ್ಲಸ್ಟರ್, ಬೇಂಗೂರು, ಚೇರಂಬಾಣೆ ಗ್ರಾಮ ಪಂಚಾಯಿತಿ, ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಇತ್ತೀಚೆಗೆ ಸರಕಾರಿ ಶಾಲೆಗಳ 4, 5, 6ನೇ ತರಗತಿ ಮಕ್ಕಳಿಗೆ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆ ನಡೆಯಿತು.
ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಅಶೋಕ್ ಉದ್ಘಾಟಿಸಿ ಮಾತನಾಡಿ, ಗಣಿತ ಸ್ಪರ್ಧೆಯು ಹಬ್ಬದ ರೀತಿಯಲ್ಲಿ ಮಾಡುವುದರಿಂದ ಪರೀಕ್ಷೆಯ ಭಯ ಹೋಗಲಾಡಿಸಲು ಸಾಧ್ಯವಿದೆ ಎಂದರು.
ಬಿ.ಆರ್.ಸಿ.ಕೆ.ಯು ರಂಜಿತ್ ಮಾತನಾಡಿ, ಶಿಕ್ಷಣದಲ್ಲಿ ಸಮುದಾಯ, ಗ್ರಾ.ಪಂ ಹಾಗೂ ಪೋಷಕರು ಶಾಲೆಯ ಎಲ್ಲಾ ತರಹದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಕ್ಕಳ ಗುಣಾತ್ಮಕ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು.
ಗ್ರಾ.ಪಂ .ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಮಕ್ಕಳಿಗೆ ಈ ಸ್ಪರ್ಧೆ ಮುಂದಿನ ಪರೀಕ್ಷೆಗಳಿಗೆ ಮೆಟ್ಟಿಲಾಗುತ್ತದೆ ಎಂದರು. ಅಕ್ಷರ ಫೌಂಡೇಶನ್ ಜಿಲ್ಲಾ ವ್ಯವಸ್ಥಾಪಕ ಹೆಚ್.ಬಿ. ಕಣ್ಣಿ ಮಾತನಾಡಿದರು.