ಮಡಿಕೇರಿ, ಫೆ. 23: ಮಂಗಳೂರು ವಿಶ್ವ ವಿದ್ಯಾನಿಲಯ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ವೀರಾಜಪೇಟೆ ತಾಲೂಕಿನ ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದು ವಾರದಿಂದ ನಡೆದ ಗ್ರಾಮೀಣ ಅಧ್ಯಯನ ಶಿಬಿರ ಸಮಾರೋಪಗೊಂಡಿತು.

ಶಿಬಿರದಲ್ಲಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಗ್ರಾಮ ಸಮೀಕ್ಷೆ, ಶಾಲಾ ಸ್ವಚ್ಛತೆ, ಬೀದಿ ನಾಟಕ ಹಾಗೂ ಜಾಥಾ ಮೂಲಕ ಜಾಗೃತಿ ಮೂಡಿಸಿದರು. ಸಮಾರೋಪ ಸಮಾರಂಭದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಆಶಾ ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು.

ಏಳು ದಿನಗಳಲ್ಲಿ ಹುದೂರು ಗ್ರಾಮ ಮತ್ತು ಹಳ್ಳಿಗಟ್ಟು ಆದಿವಾಸಿ ಸಮುದಾಯವನ್ನು ಅಧ್ಯಯನ ನಡೆಸಿರುವ ಅನುಭವ ಭವಿಷ್ಯಕ್ಕೆ ಸಹಕಾರಿಯಾಗಿರಲಿ ಎಂದು ಶ್ಲಾಘಿಸಿದರು.

ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಬಿ. ಶಾಹಿದಾ, ಕೆ.ಕೆ. ಮುತ್ತಮ್ಮ, ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರಾದ ಕೆ.ಜೆ. ರಾಬಿನ್, ಎಂ.ಎನ್. ಲೋಕೇಶ್ ಭರಣಿ, ಕೆ. ಹರಿಣಾಕ್ಷಿ, ಪ್ರಥಮ ವರ್ಷದ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರಕಲೆ, ಓಟದ ಸ್ಪರ್ಧೆ, ಕಾಳು ಹೆಕ್ಕುವುದು, ಸಂಗೀತ ಸ್ಪರ್ಧೆ ಆಯೋಜಿಸಿ ಗೆಲುವು ಸಾಧಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.