ಸೋಮವಾರಪೇಟೆ, ಪೆ. 23: ಅರೆಭಾಷೆ ಸಾಹಿತ್ಯದ ಬೆಳವಣಿಗೆಗೆ ಅರೆಭಾಷೆ ಸಮುದಾಯದ ಬೆಂಬಲ ಅಗತ್ಯವಾಗಿದೆ ಎಂದು ಅರೆಭಾಷೆ ಸಾಹಿತ್ಯದ ಹಿರಿಯ ಸಾಹಿತಿ ಹಾಗೂ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹೊದ್ದೆಟ್ಟಿ ಭವಾನಿ ಶಂಕರ ಅಭಿಪ್ರಾಯಿಸಿದರು.ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಆಲೂರು ಸಿದ್ದಾಪುರದ ಅರೆಭಾಷೆ ಗೌಡ ಸಮಾಜ, ಅರೆಭಾಷೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಆಶ್ರಯದಲ್ಲಿ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಸಂಗಯ್ಯನಪುರದಲ್ಲಿ ಆಯೋಜಿಸಿದ್ದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾಷೆ ಮರೆತರೆ ತಮ್ಮ ಮಾತೆಯನ್ನು ಮರೆತಂತೆ ಎಂದು ವ್ಯಾಖ್ಯಾನಿಸಿದ ಅವರು, ಅರೆಭಾಷೆ ಅಕಾಡೆಮಿಯಲ್ಲಿ ಪ್ರತಿಯೋರ್ವ ಅರೆಭಾಷಿಕರೂ ಸೇರ್ಪಡೆ ಗೊಳ್ಳಬೇಕು. ಆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುವಂತಾಗಬೇಕು. ಸಾಹಿತಿಗಳು, ಲೇಖಕರು, ಕವಿಗಳು, ನಾಟಕಕಾರರಿಗೆ ಅಕಾಡೆಮಿಯಿಂದ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.

ಸಮುದಾಯದ ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕು. ಸರ್ಕಾರದ ಉನ್ನತ ಹುದ್ದೆಗಳಿಗೆ ಸೇರ್ಪಡೆಗೊಳ್ಳಬೇಕು. ಅರೆಭಾಷೆಯಲ್ಲಿ ಹೆಚ್ಚಿನ ಕವನ, ಸಾಹಿತ್ಯ, ಲೇಖನಗಳು ಮೂಡಿಬರಬೇಕು. ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಸಾಹಿತ್ಯ ಓದುವ ಹವ್ಯಾಸ ಮೂಡಿಸಬೇಕು. ನಾಟಕ, ಸಿನಿಮಾ, ಆಟೋಟ, ಸಂಗೀತ, ನೃತ್ಯ, ಯಕ್ಷಗಾನಗಳಲ್ಲೂ ಯುವ ಜನಾಂಗ ತಮ್ಮ ಛಾಪು ಮೂಡಿಸಬೇಕು. ಅರೆಭಾಷೆ ಸಮುದಾಯದಲ್ಲಿರುವ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಅಕಾಡೆಮಿಯಿಂದ ಆಗಬೇಕು ಎಂದರು.