ಮಡಿಕೇರಿ, ಫೆ. 22: ಅಕ್ರಮವಾಗಿ ಕಾರಿನಲ್ಲಿ ಮೈಸೂರಿನಿಂದ ಸುಂಟಿಕೊಪ್ಪಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ರೂ. 1.50 ಲಕ್ಷ ಮೌಲ್ಯದ 6.70 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಲಾದ ಮಾರುತಿ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ.ಮೈಸೂರಿನಿಂದ ಕೊಡಗು ಜಿಲ್ಲೆಗೆ ಮಾದಕ ವಸ್ತು ಸರಬರಾಜಿನ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಕುಶಾಲನಗರ ವೃತ್ತ ನಿರೀಕ್ಷಕರು; ಕೆಂಪು ಬಣ್ಣದ ಮಾರುತಿ -800 ಕಾರಿನಲ್ಲಿ (ಕೆಎ-03-ಎಂಎಫ್1033) ಮೈಸೂರಿನಿಂದ ಗಾಂಜಾವನ್ನು ಖರೀದಿಸಿ ಸುಂಟಿಕೊಪ್ಪ ವ್ಯಾಪ್ತಿಗೆ ತರುತ್ತಿದ್ದವರನ್ನು ತಾ. 20ರಂದು ರಾತ್ರಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಸೆರೆ ಹಿಡಿದಿದ್ದಾರೆ.
(ಮೊದಲ ಪುಟದಿಂದ) ರಾಜ್ಯ ಹೆದ್ದಾರಿ - 275ರಲ್ಲಿ ಪತ್ರಾಂಕಿತ ಅಧಿಕಾರಿ ನೆಹರು, ಎಸಿಎಫ್, ಸೋಮವಾರಪೇಟೆ ವಿಭಾಗ ಅವರೊಂದಿಗೆ ತಡೆದು ನಿಲ್ಲಿಸಿ ವಾಹನವನ್ನು ಪರಿಶೀಲಿಸಿದಾಗ ವಾಹನದ ಡಿಕ್ಕಿಯಲ್ಲಿನ ಒಂದು ಕಿಟ್ ಬ್ಯಾಗ್ನಲ್ಲಿ ಖಾಕಿ ಬಣ್ಣದ ಟೇಪ್ ಸುತ್ತಿದ್ದ ಮೂರು ದೊಡ್ಡ ಬಂಡಲ್ಗಳು ಕಂಡು ಬಂದವು. ಅವುಗಳನ್ನು ತೆರೆದು ನೋಡಲಾಗಿ ಅದರಲ್ಲಿ ಒಣಗಿದ ಗಾಂಜಾ ಇರುವುದು ಕಂಡುಬಂದ ಮೇರೆಗೆ ಕಾರಿನಲ್ಲಿದ್ದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೂಲಂಕಷವಾಗಿ ವಿಚಾರ ಮಾಡಲಾಗಿ ಆರೋಪಿಗಳು ಗಾಂಜಾ ವ್ಯಸನಿಗಳಾಗಿದ್ದು, ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮೂರು ವರ್ಷಗಳಿಂದ ಮೈಸೂರು ನಗರದ ಮಂಡಿ ಮಾರ್ಕೆಟ್ ಬಳಿಯಿಂದ ಗಾಂಜಾವನ್ನು ಖರೀದಿಸಿ ತಂದು ಸಣ್ಣ ಪ್ಯಾಕೆಟ್ಗಳಿಗೆ ತುಂಬಿ 300, 400 ರೂ.ಗಳಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿರುತ್ತದೆ.
ಈ ಸಂಬಂಧ ಸುಂಟಿಕೊಪ್ಪದ ಅಹ್ಮದ್ ಶರೀಫ್ ಅವರ ಪುತ್ರ ಅಮ್ಜದ್ ಶರೀಫ್ (31) ಹಸೈನಾರ್ ಎಂಬವರ ಪುತ್ರ ಸಮೀರ್ (30) ಅಸ್ಲಾಂ ಅವರ ಪುತ್ರ ಸಮೀರ್ (30) ಹಾಗೂ ನರಸಿಂಹಮೂರ್ತಿ ಅವರ ಪುತ್ರ ರವಿ (27) ಅವರುಗಳನ್ನು ಬಂಧಿಸಲಾಗಿದೆ. ಅಲ್ಲದೆ, ಗಾಂಜಾ ಮಾರಾಟ ಮಾಡಿದ ಹಣದಿಂದ ಖರೀದಿಸಲಾದ ಮಾರುತಿ 800 ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ., ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ ಅವರು ಮಾರ್ಗದರ್ಶನದಲ್ಲಿ, ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಪಿಎಸ್ಐ ನಂದೀಶ್, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಪಿಎಸ್ಐ ಹೆಚ್.ವೈ. ವೆಂಕಟರಮಣ್, ಎಎಸ್ಐ ಗೋಪಾಲ್ ಸಿಬ್ಬಂದಿಗಳಾದ ಪ್ರಕಾಶ್, ದಯಾನಂದ, ಸಂದೇಶ್, ಸಂಪತ್, ಲೋಕೇಶ್, ಅಜಿತ್, ರವೀಂದ್ರ, ನಾಗರಾಜ್, ವಿವೇಕ್, ಸಿಡಿಆರ್ ಸೆಲ್ನ ರಾಜೇಶ್, ಗಿರೀಶ್, ಚಾಲಕರುಗಳಾದ ಗಣೇಶ್, ಪ್ರವೀಣ್, ರಾಜು ಪಾಲ್ಗೊಂಡಿದ್ದರು.
ಮನವಿ : ಜಿಲ್ಲೆಯಾದ್ಯಂತ ಗಾಂಜಾ ಮಾರಾಟದ ಜಾಲ ಹಬ್ಬಿಕೊಂಡಿದ್ದು, ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿ ಯಾವುದೇ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗಾಗಲಿ ನೀಡುವಂತೆ ಕೋರಲಾಗಿದೆ. ಇದಲ್ಲದೇ ಜಿಲ್ಲೆಯಾದ್ಯಂತ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಿದ್ದು, ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದಾಗಿರುತ್ತದೆ. ಮಾಹಿತಿ ನೀಡಿದ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿರುವುದಿಲ್ಲ. ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯವಾಗಿಡಲಾಗುವುದು ಹಾಗೂ ಸೂಕ್ತ ಬಹುಮಾನವನ್ನು ನೀಡಲಾಗುವುದೆಂದು ಪೊಲೀಸ್ ಅಧೀಕ್ಷಕಿ ಸುಮನ್.