ಮಡಿಕೇರಿ, ಫೆ. 22: ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಬೆಂಗಳೂರು ಮತ್ತು ಮೈಸೂರು ಶಾಖೆ, ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಭಾವಿ ರಫ್ತುದಾರರಿಗಾಗಿ ರಫ್ತು ಜಾಗೃತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ತಾ. 25 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡದ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕೊಡಗು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎಂ.ಬಿ. ದೇವಯ್ಯ, ಅಪರ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹ, ಬೆಂಗಳೂರು ವಿ.ಟಿ.ಪಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಸತೀಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಡಿ.ಕೆ. ಲಿಂಗರಾಜು, ಕೆಐಎಡಿಬಿ ಕೈಗಾರಿಕಾ ಪ್ರದೇಶದ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರವೀಣ್, ಸಿಡಾಕ್ ಜಂಟಿ ನಿರ್ದೇಶಕ ಎಂ. ಮಂಜುನಾಥಸ್ವಾಮಿ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೆ.ಎಸ್. ಚಂದ್ರಶೇಖರ್ ಇತರರು ಪಾಲ್ಗೊಳ್ಳಲಿದ್ದಾರೆ.
ಜಾಗೃತಿ ಶಿಬಿರಕ್ಕೆ ಉಚಿತ ಪ್ರವೇಶವಿದ್ದು, ಹೊಸದಾಗಿ ರಫ್ತು ಚಟುವಟಿಕೆಗಳನ್ನು ಕೈಗೊಳ್ಳುವವರಿಗೆ ಈ ಶಿಬಿರವು ತುಂಬಾ ಪ್ರಯೋಜನಾಕಾರಿಯಾಗಿದ್ದು, ರಫ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಜಿಲ್ಲೆಯ ಆಸಕ್ತ ಉದ್ಯಮಿಗಳು ಹಾಗೂ ವಾಣಿಜ್ಯದಾರರು ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾಹಿತಿ ಪಡೆಯುವ ಮೂಲಕ ರಾಜ್ಯದ ರಫ್ತು ಬೆಳವಣಿಗೆಗೆ ಸಹಕಾರಿಯಾಗುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ಈ ಕಚೇರಿಯ ದೂ.ಸಂ.0821–4253409/ ಮೊ.9482499718 ಅಥವಾ ಇಮೇಲ್: vಣಠಿಛಿmಥಿsoಡಿe@gmಚಿiಟ.ಛಿom ಮೂಲಕ ಸಂಪರ್ಕಿಸಬಹುದು ಎಂದು ಮೈಸೂರು ವಿ.ಟಿ.ಪಿ.ಸಿ. ಶಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.