ಮಡಿಕೇರಿ, ಫೆ. 22: ಮಾರ್ಚ್ 4 ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಸಚಿವರು ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಯಾವುದೇ ರೀತಿಯ ದೂರುಗಳು ಬರದಂತೆ ಪರೀಕ್ಷೆ ನಡೆಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಪ್ರಾಂಶುಪಾಲರಿಗೆ, ವಿವಿಧ ಇಲಾಖೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಸಚಿವರು ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಹೊಳೆ ದಾಟಿ ಬರುವ ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸುವುದು, ಹಾಗೂ ವಿಶೇಷ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸುವಂತೆ ತಿಳಿಸಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದರು.
ಪರೀಕ್ಷೆಗೆ ಸಂಬಂಧಿಸಿದಂತೆ ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಭವಾನಿ ಅವರು ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಪರೀಕ್ಷೆಗೆ 5,792 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 2,773 ಬಾಲಕರು ಮತ್ತು 3,019 ಬಾಲಕಿಯರು ಇದ್ದಾರೆ ಎಂದು ಅವರು ನೀಡಿದರು.
ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಖಜಾನೆಯಿಂದ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಲು 7 ಮಾರ್ಗಗಳನ್ನು ಗುರುತು ಮಾಡಲಾಗಿದೆ. ಈ ಸಂಬಂಧ ಪ್ರತಿ ಮಾರ್ಗಕ್ಕೆ ಪೊಲೀಸರು ಸೇರಿದಂತೆ ಅಧಿಕಾರಿಗಳನ್ನು ನಿಯೋಜಿಸಬೇಕಿದೆ ಎಂದು ಮನವಿ ಮಾಡಿದರು.
ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು, ನಾಪೋಕ್ಲು, ಪೊನ್ನಂಪೇಟೆ, ಸೋಮವಾರಪೇಟೆ, ವೀರಾಜಪೇಟೆ, ಮಡಿಕೇರಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ಶ್ರೀಮಂಗಲ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಮಡಿಕೇರಿ ಸಂತ ಮೈಕಲರ ಪದವಿ ಪೂರ್ವ ಕಾಲೇಜು, ನೆಲ್ಯ ಹುದಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು, ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಈ 16 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರತಿ ಮಾರ್ಗದಲ್ಲಿ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ ಎಂದು ಆರ್ಟಿಒ ಕಚೇರಿಯ ರೀಟಾ ಅವರು ಮಾಹಿತಿ ನೀಡಿದರು.
ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಮತ್ತೊಬ್ಬ ಮೇಲ್ವಿಚಾರಕರನ್ನು ನಿಯೋಜಿಸಲಾಗುತ್ತದೆ. ಹಾಗೆಯೇ ವೈದ್ಯರನ್ನು ನಿಯೋಜಿಸುವುದು, ಜೆರಾಕ್ಸ್ ಕೇಂದ್ರಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸುವುದು ಮತ್ತಿತರ ಕಾರ್ಯಗಳು ಆಗಬೇಕಿದೆ ಎಂದು ಭವಾನಿ ಕೋರಿದರು.
ಮದೆ ಮಹೇಶ್ವರ ಕಾಲೇಜಿನ ಪ್ರಾಂಶುಪಾಲೆ ಗುಲಾಬಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಮಡಿಕೇರಿ-ಸಂಪಾಜೆ ಮಾರ್ಗದಲ್ಲಿ ಎಕ್ಸ್ಪ್ರೆಸ್ ಬಸ್ಗಳು ಮದೆ ಗ್ರಾಮದಲ್ಲಿ ನಿಲುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪ್ರಾಂಶುಪಾಲ ಮಹಾಲಿಂಗಯ್ಯ, ವಿಜಯ ಹಾಗೂ ಇತರರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವ್ಯವಸ್ಥಿತವಾಗಿ ನಡೆಸುವ ಸಂಬಂಧ ಹಲವು ಮಾಹಿತಿ ನೀಡಿದರು.
ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕಿ ಪದ್ಮಜಾ, ತಹಶೀಲ್ದಾರರಾದ ಮಹೇಶ್, ಗೋವಿಂದ ರಾಜು, ಡಿವೈಎಸ್ಪಿ ದಿನೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ, ಎಚ್.ಕೆ.ಪಾಂಡು, ವಿವಿಧ ಕಾಲೇಜಿನ ಪ್ರಾಂಶುಪಾಲರು ಇತರರು ಇದ್ದರು.