ಮಡಿಕೇರಿ, ಫೆ. 19: ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಸ್ವಸ್ಥ ವಿಶೇಷ ಶಾಲೆಯ ಸಿಬಿಆರ್ ಸಂಯೋಜಕ ಮುರುಗೇಶ್ ಸಲಹೆ ನೀಡಿದರು.
ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ವೀರಾಜಪೇಟೆ ತಾಲೂಕಿನ ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಗ್ರಾಮೀಣ ಅಧ್ಯಯನ ಶಿಬಿರದಲ್ಲಿ ‘ಸಮಾಜ ಕಾರ್ಯಕರ್ತ ರಲ್ಲಿ ನಾಯಕತ್ವ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.
ಸಮಾಜ ಕಾರ್ಯ ವಿದ್ಯಾರ್ಥಿ ಗಳು ಸಮಾಜದ ಸಮಸ್ಯೆಗಳನ್ನು ಅರಿತುಕೊಂಡು ಅದರ ಬಗ್ಗೆ ಅಧ್ಯಯನ ಮಾಡಬೇಕು. ಬಡ ಜನರಿಗೆ ಬೇಕಾದ ಸೌಲಭ್ಯ ಗಳನ್ನು ಸರ್ಕಾರದಿಂದ ಒದಗಿಸುವಂತೆ ಕೆಲಸ ಮಾಡಬೇಕು. ನಾಯಕನಾದವನಿಗೆ ಸಮಯಪ್ರಜ್ಞೆ, ತಾಳ್ಮೆ ಇರಬೇಕು. ನಾಯಕ ಯಾವುದೇ ಕಾರಣಕ್ಕೆ ನಕರಾತ್ಮಕವಾಗಿ ಚಿಂತನೆ ಮಾಡದೆ ಸಕರಾತ್ಮಕವಾಗಿ ಚಿಂತಿಸಬೇಕು ಎಂದರು. ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಎಂ. ಭೂತನಕಾಡು ಸಮಾಜ ಕಾರ್ಯ-ಪತ್ರಿಕೆ ವಿಷಯದ ಬಗ್ಗೆ ಮಾತ ನಾಡಿದರು. ವಿಕಾಸ್ ಜನ ಸೇವಾ ಟ್ರಸ್ಟ್ ಹಾಗೂ ಜೆಸಿಐ ಸುಂಟಿಕೊಪ್ಪ ಘಟಕದ ಅಧ್ಯಕ್ಷ ರಮೇಶ್ ಮಾತನಾಡಿದರು. ಈ ಸಂದರ್ಭ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ರಾಬಿನ್ ಇದ್ದರು. ರಾತ್ರಿ ಹಳ್ಳಿಗಟ್ಟು ಹಾಡಿಯಲ್ಲಿ ಹಾಡಿ ನಿವಾಸಿಗಳೊಂದಿಗೆ ಶಿಬಿರಾರ್ಥಿಗಳು ಭೋಜನ ಮಾಡಿದರು.