ಮಡಿಕೇರಿ, ಫೆ.20: ಪ್ರಸಕ್ತ(2019-20) ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ನದಿ ತಟದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಮನೆಗಳು ಹಾನಿಗೀಡಾಗಿದ್ದು, ಈ ಮನೆಗಳನ್ನು ಪೂರ್ಣಹಾನಿ (ಎ ಕ್ಯಾಟಗೆರಿ- 149) ಮತ್ತು ಭಾಗಶ: ಹಾನಿ (ಬಿ ಕ್ಯಾಟಗೆರಿ- 88) ಎಂದು ವಿಂಗಡಿಸಿ ಜಿಲ್ಲೆಯ ವಿವಿಧ ಭಾಗಗಳ ಒಟ್ಟು 237 ಫಲಾನುಭವಿಗಳನ್ನು ಪಟ್ಟಿ ಮಾಡಿ, ರಾಜೀವ್ ಗಾಂಧಿ ವಸತಿ ನಿಗಮದ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗಿದೆ. ಈ ಮನೆಗಳ ನಿರ್ಮಾಣಕ್ಕಾಗಿ ಪ್ರತಿ ಫಲಾನುಭವಿಗಳಿಗೆ ಸರ್ಕಾರದ ಆದೇಶದಂತೆ ಹಂತ ಹಂತವಾಗಿ ಒಟ್ಟು ರೂ.5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. (ಮೊದಲ ಪುಟದಿಂದ) ಅದೇ ರೀತಿ ಎ ಮತ್ತು ಬಿ ವೃಂದದ ಪಟ್ಟಿಯಲ್ಲಿರುವ ಮನೆಗಳಿಗೆ ಬಾಡಿಗೆ ಹಣ ಪಾವತಿಸುವ ಬಗ್ಗೆ 2019 ರ ಫೆಬ್ರುವರಿ 10 ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಆದ್ಯತೆಯನ್ನು ನೀಡಿ ತಿಂಗಳಿಗೆ 5 ಸಾವಿರ ರೂ ನಂತೆ ಗರಿಷ್ಠ 10 ತಿಂಗಳಿಗೆ 50 ಸಾವಿರ ರೂ. ಬಾಡಿಗೆ ಹಣ ಪಾವತಿಸಲು ತೀರ್ಮಾನಿಸಿದಂತೆ 2019-20 ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೆ ತುತ್ತಾದ ಒಟ್ಟು 228 ಎ ಮತ್ತು ಬಿ ಕ್ಯಾಟಗೆರಿ ಮನೆಗಳ ಫಲಾನುಭವಿಗಳಿಗೆ ಮೊದಲನೇ ಹಂತದಲ್ಲಿ ಒಟ್ಟು 05 ತಿಂಗಳ ಬಾಡಿಗೆ ಹಣ ತಲಾ ರೂ.25 ಸಾವಿರದಂತೆ ಒಟ್ಟು 57 ಲಕ್ಷ ರೂ. ಮೊತ್ತವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುರಕ್ಷಿತವಲ್ಲದ ಜಾಗಗಳಲ್ಲಿರುವ ಮನೆಗಳನ್ನು ಶಾಶ್ವತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತವು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಲ್ಲಿ ಈ ಸ್ಥಳಗಳಿಗೆ ತೆರಳುವುದಾಗಿ ಪ್ರವಾಹದಿಂದ ಬಾಧಿತವಾದ ಜನರು ಜಿಲ್ಲಾಧಿಕಾರಿಯವರ ಕಚೇರಿಗೆ ಬಂದು ಮನವಿ ಸಲ್ಲಿಸಿರುತ್ತಾರೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ವೀರಾಜಪೇಟೆ ತಾಲೂಕು ಸಿದ್ದಾಪುರ, ಕರಡಿಗೋಡು ಮತ್ತು ಗುಹ್ಯ ಭಾಗದ ಜನರು ನಿವೇಶನಕ್ಕಾಗಿ ಸಿದ್ದಾಪುರದಲ್ಲಿ ಆಹೋ ರಾತ್ರಿ ಹೋರಾಟ ನಡೆಸುತ್ತಿದ್ದರು, ಈ ಹಿನ್ನೆಲೆ ಜಿಲ್ಲಾಡಳಿತವು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರ್ಕಾರಿ ಜಾಗ ಗುರುತಿಸಿದೆ ಎಂದು ಅವರು ಹೇಳಿದ್ದಾರೆ.

ಎಲ್ಲೆಲ್ಲಿ ಜಾಗ: ಸೋಮವಾರಪೇಟೆ ತಾಲೂಕಿನ ಅಭ್ಯತ್‍ಮಂಗಲದಲ್ಲಿ 87/2 ಸ.ನಂ.ನಲ್ಲಿ 8.22 ಎಕರೆ ಜಾಗ ಗುರುತಿಸಲಾಗಿದ್ದು, ನೆಲ್ಲಿಹುದಿಕೇರಿ, ವಾಲ್ನೂರು, ನಂಜರಾಯಪಟ್ಟಣ ಮತ್ತು ಬಸವನಹಳ್ಳಿ ಗ್ರಾಮಗಳ 117 ಫಲಾನುಭವಿಗಳಿಗೆ 128 ನಿವೇಶನ ಗುರುತಿಸಲಾಗಿದೆ.

ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ 37/26 ಪಿ1 ಸ.ನಂ.ನಲ್ಲಿ 6 ಎಕರೆ ಜಾಗ ಗುರುತಿಸಿದ್ದು, ಸಿದ್ದಾಪುರ, ಕರಡಿಗೋಡು ಮತ್ತು ಗುಹ್ಯ ಗ್ರಾಮದ 103 ಫಲಾನುಭವಿಗಳಿಗೆ 125 ನಿವೇಶನ ಗುರುತಿಸಲಾಗಿದೆ. ಅರುವತ್ತೋಕ್ಲು ಗ್ರಾಮದ 180/2 ಸ.ನಂ.ನಲ್ಲಿ 0.50 ಎಕರೆ ಜಾಗ ಗುರುತಿಸಿದ್ದು, ತಿತಿಮತಿ, ಚೆನ್ನಂಗೊಲ್ಲಿ, ಕಾನೂರು ಮತ್ತು ಮತ್ತೂರು ಗ್ರಾಮದ 9 ಫಲಾನುಭವಿಗಳಿಗೆ 9 ನಿವೇಶನ ಗುರುತಿಸಲಾಗಿದೆ.

ಕೆದಮುಳ್ಳೂರು ಗ್ರಾಮದ 493/1 ಸ.ನಂ.ನಲ್ಲಿ 0.081/4 ಎಕರೆ ಜಾಗ ಗುರುತಿಸಿದ್ದು, ತೋರ ಗ್ರಾಮದ 3 ಫಲಾನುಭವಿಗಳಿಗೆ 3 ನಿವೇಶನ ಗುರುತಿಸಲಾಗಿದೆ. ಹಾಗೆಯೇ ಬಾಳುಗೋಡು ಗ್ರಾಮದ 337/1 ಸ.ನಂ.ನಲ್ಲಿ 0.021/4 ಜಾಗ ಗುರುತಿಸಿದ್ದು, ನಾಂಗಾಲ ಗ್ರಾಮದ ಒಬ್ಬ ಫಲಾನುಭವಿಗೆ ನಿವೇಶನ ಗುರುತಿಸಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. 2019-20ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ನದಿ ತಟದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಮನೆಗಳು ಹಾನಿಯಾದ ಒಟ್ಟು 237 ಫಲಾನುಭವಿಗಳಿಗೆ ಜಿಲ್ಲೆಯ 5 ಸ್ಥಳಗಳಲ್ಲಿ ಜಾಗವನ್ನು ಗುರುತಿಸಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯವರಿಂದ ವ್ಯವಸ್ಥಿತವಾಗಿ 30’x40’ ಅಳತೆಯ ನಿವೇಶನಗಳಿಗೆ ಬಡಾವಣೆ ವಿನ್ಯಾಸ ನಕ್ಷೆ ರೂಪಿಸಲಾಗಿದೆ.

ಈ ಪೈಕಿ ಅಭ್ಯತ್‍ಮಂಗಲದಲ್ಲಿ 60 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 177 ನಿವೇಶನಗಳನ್ನು 2019 ರ ಫೆಬ್ರವರಿ 26 ರಂದು ಉಪ ವಿಭಾಗಾಧಿಕಾರಿ ಅವರ ನೇತೃತ್ವದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯವರಿಂದ ರೂಪಿಸಲಾದ ನಿವೇಶನ ನಕ್ಷೆಯಂತೆ ಸಂತ್ರಸ್ತರ ಸಮ್ಮುಖದಲ್ಲಿಯೇ ನಿವೇಶನ ಹಂಚಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

2019-20 ರ ಸಾಲಿನ ಪ್ರಕೃತಿ ವಿಕೋಪದಿಂದ ಹಾನಿಯಾದ ಅಧಿಕೃತ ಮನೆಗಳಿಗೆ ಈಗಾಗಲೇ ಪ್ರತೀ ಮನೆಗೆ 5 ಲಕ್ಷ ರೂ ಗಳನ್ನು 4 ಹಂತಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಅನಧಿಕೃತ ಮನೆಗಳಿಗೂ ಸಹ 2019 ರ ತಾ. 26 ರಂದು ಎಲ್ಲಾ ನಿವೇಶನಗಳ ಹಂಚಿಕೆಯಾದ ನಂತರ ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿಕಾರಿಗಳಿಂದ ಜಿ.ಪಿ.ಎಸ್ ಆದ ನಂತರ ನಿಯಮಾನುಸಾರ ಪ್ರತಿ ಮನೆಗೆ 5 ಲಕ್ಷ ರೂಗಳನ್ನು 4 ಹಂತಗಳಲ್ಲಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು. ಆದ್ದರಿಂದ 2019-20ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ವಾಸದ ಮನೆಗಳಿಗೆ ಪರಿಹಾರ ಪಾವತಿಸುವ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅದೇ ರೀತಿ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಗುರುತಿಸಲಾಗಿರುವ ಸ್ಥಳಕ್ಕೆ ಈ ದಿನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ಇತರೆ ಅಧಿಕಾರಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯವರಿಗೆ ಬಡಾವಣೆ ವಿನ್ಯಾಸ ನಕ್ಷೆಯನ್ನು ತುರ್ತಾಗಿ ತಯಾರಿಸಲು ನಿರ್ದೇಶನ ನೀಡಲಾಗಿದೆ. ಉಳಿದಂತೆ ಅರ್ವತ್ತೊಕ್ಲು, ಕೆದಮುಳ್ಳೂರು ಮತ್ತು ಬಾಳುಗೋಡು ಗ್ರಾಮದ ಸರ್ಕಾರಿ ಜಾಗಗಳನ್ನು ಪುನರ್ವಸತಿ ಉದ್ದೇಶಕ್ಕೆ ಕಾಯ್ದಿರಿಸಲು ಕ್ರಮ ವಹಿಸಲಾಗಿದ್ದು, ಶೀಘ್ರದಲ್ಲಿ ಕಾಯ್ದಿರಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.