‘ಶಕ್ತಿ’ಗೆ ಸ್ಪಂದನ

*ಸಿದ್ದಾಪುರ, ಫೆ.19 : ಮಹಾಮಳೆಯಿಂದ ಕಳೆದ ವರ್ಷ ಮನೆ ಕಳೆದುಕೊಂಡಿದ್ದ ವಾಲ್ನೂರು ಹೊಳೆ ಕರೆ ನಿವಾಸಿ ರಾಜೇಶ್ ಅವರಿಗೆ ಕೊನೆಗೂ ಪರಿಹಾರದ ಹಣ ಮತ್ತು ಮನೆ ಬಾಡಿಗೆ ಮೊತ್ತ ದೊರೆತಿದೆ. ಸೂಕ್ತ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರೂ, ಸೋಮವಾರಪೇಟೆ ತಾಲೂಕು ಕಚೇರಿ ಹಾಗೂ ಕುಶಾಲನಗರ ನಾಡಕಚೇರಿಗೆ ಅಲೆದರೂ ಪರಿಹಾರ ದೊರಕದೆ ಇದ್ದ ಬಗ್ಗೆ ಪತ್ರಿಕೆ ವರದಿ ಮಾಡಿದ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ರಾಜೇಶ್ ಅವರ ಅರ್ಜಿಯನ್ನು ಪುರಸ್ಕರಿಸಿ ರೂ.1 ಲಕ್ಷ ಪರಿಹಾರ ಮತ್ತು ಮನೆ ಬಾಡಿಗೆ ಹಣವನ್ನು ಮಂಜೂರು ಮಾಡಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ರಾಜೇಶ್ ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದೀಗ ಪತ್ರಿಕಾ ವರದಿಯಿಂದ ತಮಗೆ ಪರಿಹಾರ ದೊರೆತ್ತಿರುವ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.