ಸೋಮನ ಹಳ್ಳಿಯ ಮಕ್ಕಳು ಶಾಲೆಯ

ಬಯಲಲಿ ನೆರೆದರು ಒಂದಾಗಿ |

ಬರಲಿಹ ಶಿವರಾತ್ರಿಯದಿನ ನಡೆಸಲು

ಜಾಗರಣೆಯ ಬಲು ಜೋರಾಗಿ || 1 ||

ಶಿವನನು ಮೆಚ್ಚಿಸಬೇಕೆಂದಿದ್ದರೆ

ಜಾಗರಣೆಯ ನಾವ್ ಮಾಡೋಣ |

ಶಿವ ದೇವಾಲಯದೆದುರಿನ ಗುಡಿಯಲಿ

ಶಿವಕೀರ್ತನೆಯನು ಪಾಡೋಣ || 2 ||

ರಾತ್ರಿಯ ಮೊದಲಿಗೆ ಎಲ್ಲರು ಕುಣಿಯುತ

ನುಡಿದರು ತಾರಕ ಸ್ವರದಲ್ಲಿ |

ಸಮಯವು ಸಾಗಲು ನಿಲ್ಲುವುದೇತಕೆ

ಕುಳಿತೇ ಹಾಡುವವೆನ್ನುತಲಿ || 3 ||

ಹಾಡಲು ಕೂರುವುದೇತಕೆ ಮೆಲ್ಲನೆ

ಮಲಗುತ ಹಾಡಿದರೇನಂತೆ |

ಕಣ್ಣನು ತೆರೆದೇ ಮಲಗುತ ನುತಿಸುವ

ದೇವರು ಮೆಚ್ಚಲು ಸಾಕಂತೆ || 4 ||

ಕಣ್ಣನು ಮುಚ್ಚಿಯೆ ಹಾಡಿದರಾಗದೆ

ಕೇಳನೆ ದೇವರು ಗಾನವನು? |

ಮೆಲ್ಲನೆ ಮನದಲಿ ಭಜಿಸಿದರಾಯಿತು

ಶಂಕರ ನಮ್ಮನು ಮೆಚ್ಚುವನು || 5 ||

ಕೆಲವೇ ನಿಮಿಷದಿ ಮುಚ್ಚಿದ ಕಣ್ಣಲಿ

ಮಕ್ಕಳು ನಿದ್ರೆಗೆ ಜಾರಿದರು |

ದೇವರು ಚಿಣ್ಣರ ಜಾಗರಣೆಗೆ ಕಿರು

ನಗುವಲಿ ತೃಪ್ತಿಯ ತೋರಿದರು || 6 ||

ಸ್ವಾರ್ಥವು ಇಲ್ಲದೆ ಮಕ್ಕಳು ಮಾಡಿದ

ಶಿವರಾತ್ರಿಯ ಅ ಜಾಗರಣೆ |

ಸುಲಭದಿ ದೇವರ ಕೃಪೆಗದು ಸಂದಿತು

ಮುಗ್ಧತೆ ಬೀರಿದ ನಿಜಸ್ಮರಣೆ || 7 ||