ಸೋಮವಾರಪೇಟೆ, ಫೆ. 18: ಜಿಲ್ಲೆಯ ಪೊನ್ನಂಪೇಟೆ ಕ್ರೀಡಾ ಹಾಸ್ಟೆಲ್‍ನಲ್ಲಿ ನಡೆದಿರುವ ಹಾಕಿ ಕ್ರೀಡೆಯ ಆಯ್ಕೆ ಪ್ರಕ್ರಿಯೆ ಬಗ್ಗೆ ಕೆಲವು ಪೋಷಕರು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಹಾಸ್ಟೆಲ್‍ನಲ್ಲಿ 8ನೇ ತರಗತಿಗೆ ಹಾಕಿ ಕ್ರೀಡೆ ವಿಭಾಗದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿರುವದು ಪಾರದರ್ಶಕವಾಗಿಲ್ಲ. ತಕ್ಷಣ ಈ ಪ್ರಕ್ರಿಯೆಯನ್ನು ರದ್ದುಪಡಿಸಿ, ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು. ತಪ್ಪಿದಲ್ಲಿ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಪೋಷಕರು, ಅಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಹಲವಷ್ಟು ವಿದ್ಯಾರ್ಥಿಗಳು ಅರ್ಹತೆಯಿದ್ದರೂ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಉತ್ತಮ ಆಟ, ದೇಹದಾಡ್ರ್ಯತೆ, ಎತ್ತರ ಇದ್ದರೂ ಸಹ ಅಂತಹ ವಿದ್ಯಾರ್ಥಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ರಾಜಕೀಯ ಹಾಗೂ ಪಕ್ಷಪಾತ ಧೋರಣೆಯಿಂದ ನಿಜವಾದ ಪ್ರತಿಭೆಗಳಿಗೆ ಅನ್ಯಾಯವಾಗಿದ್ದು, ಇದನ್ನು ತಕ್ಷಣ ಸರಿಪಡಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಾಗಿದೆ.