ಪಾಲಿಬೆಟ್ಟ, ಫೆ. 18 : ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್ ವಲಿಯವರ ಉರೂಸ್ ಸಮಾರೋಪ ಸಮಾರಂಭ ನಡೆಯಿತು.

ದರ್ಗಾ ಆವರಣದ ವೇದಿಕೆಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಕೊಡಗು ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಎಡಪಾಲದ ಕೆ.ಎ ಮಹಮ್ಮೂದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಬೋಧ ಸ್ವರೂಪಾನಂದ, ಕುಶಾಲನಗರದ ರೆ .ಫಾ ಜೀವನ್ , ಕಳಸದ ನೌಫಲ್ ಸಖಾಫಿ, ಉಪ ವಿಭಾಗಾಧಿಕಾರಿ ಜವರೇಗೌಡ, ಡಿವೈಎಸ್ಪಿ ದಿನೇಶ್ ಕುಮಾರ್, ಅಸಿಸ್ಟೆಂಟ್ ಡೈರೆಕ್ಟರ್ ಕೆ.ಪಿ ಷಂಶುದ್ದೀನ್, ವೀರಾಜಪೇಟೆ ತಹಶೀಲ್ದಾರ್ ಮಹೇಶ್,ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ ಯಾಕೂಬ್, ಜಮಾಅತ್ ಕಮಿಟಿ ಅಧ್ಯಕ್ಷ ಕೆ.ಎಚ್. ಅಬೂಬಕರ್, ಮಾಜಿ ಅಧ್ಯಕ್ಷ ಜಾಬ್ಬರ್, ಪಿ.ಕೆ ಇಸ್ಮಾಹಿಲ್, ಪ್ರಧಾನ ಕಾರ್ಯದರ್ಶಿ ಹನೀಫ್ ಸೇರಿದಂತೆ ಸಮಾಜ ಸೇವಕರು. ದಾನಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಡಾ.ಉಸ್ತಾದ್ ಕೋಯಾ ಕಾಪಾಡ್ ತಂಡದವರಿಂದ ಬುರ್ದಾ, ಕವಾಲಿ ,ನಹತೇ ಶರೀಫ್ ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಜಿಲ್ಲೆ ಹಾಗೂ ವಿವಿಧ ರಾಜ್ಯದಿಂದ ಭಕ್ತ ಜನಸಾಗರವೇ ಹರಿದು ಬಂದಿತ್ತು. ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಉರೂಸ್ ಅಂಗವಾಗಿ ಪಾಲಿಬೆಟ್ಟ ಗ್ರಾಮವೇ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು ಕೇರಳದ ಹಲ್ವಾ ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳ ವ್ಯಾಪಾರ ನಡೆಯಿತು. ಸಿಐ ಅನೂಪ್ ಮಾದಪ್ಪ ಹಾಗೂ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

-ಪುತ್ತಂ ಪ್ರದೀಪ್