ಮಡಿಕೇರಿ, ಫೆ. 18: ತಾನು ಪ್ರೀತಿಸುತ್ತಿದ್ದ ಯುವತಿ ಮಾತಿನ ನಡುವೆ ನಿಂದಿಸಿದಳೆನ್ನಲಾದ ಕಾರಣದಿಂದ ನೊಂದ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ವೀರಾಜಪೇಟೆ ತಾಲೂಕಿನ ಹುದಿಕೇರಿ ನಿವಾಸಿಯಾಗಿದ್ದ ಸಂಜು (22) ಎಂಬಾತನೇ ನೇಣಿಗೆ ಕೊರಳೊಡ್ಡಿ ಇಹಲೋಕ ತ್ಯಜಿಸಿರುವ ಪ್ರೇಮಿ. ಕುಶಾಲನಗರ ಸಮೀಪದ ಕೂಡುಮಂಗಳೂರಿನ ಬರ್ಡ್ ಆಫ್ ಪ್ಯಾರಡೈಸ್ ಹೋಂಸ್ಟೇಯಲ್ಲಿ ಐದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಸಂಜು ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಯುತ್ತಿದ್ದಾಗ ``ನೀನು ಮದ್ಯ ಸೇವಿಸಿರುವೆ'' ಎಂದು ಆಕೆ ಸಂಜು ಜೊತೆ ವಾಗ್ವಾದ ನಡೆಸಿದ್ದಳು ಎನ್ನಲಾಗಿದೆ.

ಇದರಿಂದ ಮನನೊಂದ ಸಂಜು ಆಕೆಯ ವೇಲ್ ತೆಗೆದುಕೊಂಡು ಬಂದು ಹೋಂಸ್ಟೇಯ ಕಾಫಿ ತೋಟದ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ನೇಣುಬಿಗಿದುಕೊಂಡಿದ್ದ ಸಂಜುವಿನ ಮೃತದೇಹವನ್ನು ಕಂಡ ಹೋಂಸ್ಟೇ ವ್ಯವಸ್ಥಾಪಕರು ಆತನ ಮನೆಯವರಿಗೆ ಮತ್ತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್.ಐ. ನಂದೀಶ್ ಮತ್ತು ಸಿಬ್ಬಂದಿಯವರು ಸಂಜುವಿನ ಮೃತದೇಹವನ್ನು ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. -ಕ್ಯೂಟ್ ಕೂರ್ಗ್ ನ್ಯೂಸ್