ಮಡಿಕೇರಿ, ಫೆ. 18: ಪ್ರಧಾನಮಂತ್ರಿಯವರ ಫಿಟ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ, ಆರೋಗ್ಯದ ಕಾಳಜಿ ಹೊಂದಲು ಅರಿವು ಮೂಡಿಸುವ ಸಲುವಾಗಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ದೈಹಿಕ ಶಿಕ್ಷಣ ವಿಭಾಗ, ಕೊಡಗು ಉಪನ್ಯಾಸಕರ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ವಿವಿಧ ಇಲಾಖೆಯ ನೌಕರರಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಕೊಡಗು ಉಪನ್ಯಾಸಕರ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ದ್ವಿತೀಯ ಸ್ಥಾನವನ್ನು ಮಾಂಡೋವಿ ಮೋಟರ್ಸ್ ತಂಡ ತಮ್ಮದಾಗಿಸಿಕೊಂಡಿತು.

ಪಂದ್ಯಾಟದಲ್ಲಿ ಕೊಡಗು ಉಪನ್ಯಾಸಕರ ತಂಡ, ಕೊಡಗು ಶಿಕ್ಷಕರ ತಂಡ, ಕೊಡಗು ಪ್ರೆಸ್‍ಕ್ಲಬ್ ತಂಡ, ಕೊಡಗು ವಿದ್ಯುತ್ ಇಲಾಖೆ ತಂಡ, ಕೊಡಗು ಪೊಲೀಸ್ ಇಲಾಖೆ ತಂಡ, ಕೊಡಗು ಇಂಜಿನಿಯರ್ಸ್ ತಂಡ, ಮುಳಿಯ ಜ್ಯುವೆಲ್ಲರ್ಸ್ ತಂಡ, ಲಿವಿಸ್ಟಾ ತಂಡ, ಕೊಡಗು ಬ್ಯಾಂಕರ್ಸ್ ತಂಡ ಸೇರಿದಂತೆ ಹತ್ತು ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಅತ್ಯುತ್ತಮ ಶಿಸ್ತಿನ ತಂಡದ ಪ್ರಶಸ್ತಿಯನ್ನು ಕೊಡಗು ವಿದ್ಯುತ್ ಇಲಾಖೆ ಪಡೆದುಕೊಂಡಿತು. ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೊಡಗು ಉಪನ್ಯಾಸಕರ ತಂಡದ ಸಂದೀಶ್, ಮ್ಯಾನ್ ಆಫ್ ದಿ ಸೀರಿಯಸ್ ಪ್ರಶಸ್ತಿಯನ್ನು ಉಪನ್ಯಾಸಕರ ತಂಡದ ಮಹೇಶ್, ಬೆಸ್ಟ್ ಬ್ಯಾಟ್ಸ್‍ಮನ್ ವಿದ್ಯುತ್ ಇಲಾಖೆ ತಂಡದ ಪ್ರಶಾಂತ್, ಬೆಸ್ಟ್ ಬೌಲರ್ ಮಿಲನ್ ಉಪನ್ಯಾಸಕರ ತಂಡ, ಹಾಗೂ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಮಾಂಡೋವಿ ಮೋಟರ್ಸ್ ತಂಡದ ಪವನ್ ಪಡೆದುಕೊಂಡರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥ ರವಿಶಂಕರ್ ಇದ್ದರು. - ಕೆ.ಎಂ. ಇಸ್ಮಾಯಿಲ್ ಕಂಡಕರೆ