ಶ್ರೀಮಂಗಲ, ಫೆ. 18 : ತಾ. 15 ರಿಂದ ನಿರಂತರ 3 ದಿನ ದ.ಕೊಡಗಿನ ಬೆಳ್ಳೂರು ಹಾಗೂ ಹರಿಹರ ಗ್ರಾಮದಲ್ಲಿ 3 ಹುಲಿ ದಾಳಿ ಪ್ರಕರಣದಲ್ಲಿ 2 ಹಸುಗಳನ್ನು ಹಾಗೂ 1 ಕರುವನ್ನು ಕೊಂದು 1 ಹಸುವನ್ನು ಗಂಭೀರ ಗಾಯಗೊಳಿಸಿದ್ದ ಬೆನ್ನಲ್ಲೇ ಅರಣ್ಯ ಇಲಾಖೆ ಹುಲಿಯ ಚಲನ ವಲನ ಕಂಡು ಹಿಡಿಯಲು ಅಳವಡಿಸಿದ್ದ ಕ್ಯಾಮರಾಕ್ಕೆ ಹುಲಿಯ ಚಿತ್ರ ಸೆರೆಯಾಗಿದೆ.

ತಾ. 15 ರಂದು ಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ರೈತ ಗೋಪಾಲ್, ತಾ. 16 ರಂದು ಹಾಡಹಗಲೇ ಹರಿಹರ ಗ್ರಾಮದ ರೈತ ಮುಕ್ಕಾಟಿರ ಪೆಮ್ಮಯ್ಯ ಮತ್ತು ತಾ. 16 ರಾತ್ರಿ ಹರಿಹರ ಗ್ರಾಮದ ತೀತಿರÀ ಸಿ.ಮಾದಪ್ಪ ಅವರ ಜಾನುವಾರುಗಳ ಮೇಲೆ ಹುಲಿ ದಾಲಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರು, ಗ್ರಾ.ಪಂ ಅಧ್ಯಕ್ಷರು, ಕೊಡಗು ಬೆಳೆಗಾರರ ಒಕ್ಕೂಟ, ರೈತ ಸಂಘ ಕೂಡಲೇ ಹುಲಿ ಸೆರೆಗೆ ಸ್ಥಳಕ್ಕಾಗಮಿಸಿದ ತಿತಿಮತಿ ಎಸಿಎಫ್ ಶ್ರೀಪತಿ ಮತ್ತು ದೂರವಾಣಿ ಮೂಲಕ ವೀರಾಜಪೇಟೆ ಡಿಎಫ್‍ಓ ಶಿವಶಂಕರ್ ಅವರನ್ನು ಒತ್ತಾಯಿಸಿತ್ತು.

ಈ ಹಿನ್ನೆಲೆಯಲ್ಲಿ ಹರಿಹರ ಗ್ರಾಮದ ತೀತಿರ ಮಾದಪ್ಪ ಅವರ ಹಸುವನ್ನು ಕೊಂದು ಕರುವನ್ನು ತಿಂದು ಉಳಿಸಿರುವ ಕಳೆಬಹರದ ಸಮೀಪ 5 ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. 5 ಕ್ಯಾಮರಾದ ಪೈಕಿ 1 ಕ್ಯಾಮರಾದಲ್ಲಿ ಸೋಮವಾರ ರಾತ್ರಿ 8.46 ಕ್ಕೆ, 9.02 ಕ್ಕೆ, 9.08 ರ ನಡುವೆ ಹುಲಿ ಬಂದಿರುವುದನ್ನು ಕ್ಯಾಮರಾ ಸೆರೆಹಿಡಿದಿದೆ.

ಇದರಿಂದ ಹುಲಿ ಸೆರೆಗೆ ನಿಯಾಮಳಿಯಂತೆ ಅನುಮತಿ ಪಡೆಯಲು ಜಿಲ್ಲೆಯ ಅರಣ್ಯಾಧಿಕಾರಿ ಗಳು ಮೇಲಾಧಿಕಾರಿಯೊಂದಿಗೆ ಕೊಡಗಿನ ಹುಲಿ ಹಾವಳಿಯ ಗಂಭೀರತೆಯನ್ನು ಮನವರಿಕೆ ಮಾಡಿ ಪ್ರಯತ್ನಿಸುತ್ತಿರುವುದು ತಿಳಿದು ಬಂದಿದೆ.

ಕ್ಯಾಮರಾಕ್ಕೆ ಹುಲಿ ಸೆರೆಯಾಗಿರು ವುದನ್ನು ಅರಣ್ಯ ಇಲಾಖೆ ಉನ್ನತ ಮೂಲಗಳು ಖಚಿತಪಡಿಸಿದ್ದು ಕೊಡಗು ಜಿಲ್ಲಾ ವನ್ಯಜೀವಿ ವಾರ್ಡನ್ ಕುಂಞಂಗಡ ಬೋಸ್ ಮಾದಪ್ಪ ಅವರು ಸಹ ಕ್ಯಾಮರಕ್ಕೆ ಸೆರೆಯಾಗಿ ರುವ ಹುಲಿಯ ಬಗ್ಗೆ ಖಚಿತ ಪಡಿಸಿದ್ದಾರೆ. - ಹರೀಶ್, ಜಗದೀಶ್