ಕೂಡಿಗೆ, ಫೆ. 17: ಹುದುಗೂರು ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ಹುದುಗೂರಿನ ಸಂಘದ ಆವರಣದಲ್ಲಿ ನಡೆಯಿತು. ಪುರುಷರಿಗೆ ಕಬಡ್ಡಿ ಪಂದ್ಯಾವಳಿಯಲ್ಲಿ ಬ್ಯಾಡಗೊಟ್ಟ ಅಣ್ಣಯ್ಯ ತಂಡ ಪ್ರಥಮ, ಗಿರೀಶ್ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೂಡುಮಂಗಳೂರು ಬಸವೇಶ್ವರ ತಂಡ ಪ್ರಥಮ, ಬ್ಯಾಡಗೊಟ್ಟ ಅಣ್ಣಯ್ಯ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಯಲ್ಲಿ ಯಡವನಾಡು ಬಸವೇಶ್ವರ ಮಹಿಳಾ ಸಂಘ ಪ್ರಥಮ, ಕಾಳಿಕಾಂಬ ಹಿರಿಯ ಮಹಿಳಾ ತಂಡ ದ್ವಿತೀಯ ಸ್ಥಾನ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಯಡವನಾಡು ಗಿರಿಜನ ಆಶ್ರಮ ಶಾಲೆ ಪ್ರಥಮ, ಸರ್ಕಾರಿ ಪ್ರಾಥಮಿಕ ಶಾಲೆ ಯಡವನಾಡು ದ್ವಿತೀಯ ಸ್ಥಾನ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಕೆವಿಸಿ ಹುದುಗೂರು ತಂಡ ಪ್ರಥಮ, ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಶಾಲಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಗೂರು ಗ್ರಾ.ಪಂ ಅಧ್ಯಕ್ಷ ಡಿ.ಎಂ.ರಮೇಶ್, ಯುವಕ ಸಂಘದ ಅಧ್ಯಕ್ಷ ಕೆ.ಪಿ.ಗಿರೀಶ್, ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ.ಚಾಮಿ, ಗ್ರಾಮದ ಪ್ರಮುಖರಾದ ಕುಮಾರಪ್ಪ, ಚಿಣ್ಣಪ್ಪ, ಕೆ.ಬಿ.ಧನಂಜಯ್ ಪಾಲ್ಗೊಂಡಿದ್ದರು.
ಜಿಲ್ಲಾ ಸರ್ವತೋಮುಖ ಪ್ರಶಸ್ತಿಯನ್ನು ಬಿ.ಎಲ್.ಸುರೇಶ್ ಅವರಿಗೆ ನೀಡಿ, ನಿವೃತ್ತ ಸೈನಿಕ ಹೆಚ್.ಆರ್.ಗಣೇಶ್, ಸಿ.ಆರ್.ಪಿ.ಎಫ್ ನಿವೃತ್ತ ಯೋಧರಾದ ರಾಣಿ, ಆನೆ ಕವಾಡಿಗ ಜೆ.ಎಸ್.ವಸಂತ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಮೋನಿಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.