ಗೋಣಿಕೊಪ್ಪಲು, ಫೆ. 17: ಪೊನ್ನಂಪೇಟೆಯ ಅಪ್ಪಚ್ಚ ಕವಿ ವಿದ್ಯಾಲಯದ ವಿದ್ಯಾರ್ಥಿಗಳು ಪೊನ್ನಂಪೇಟೆ ನಗರದಲ್ಲಿ ಸ್ವಚ್ಛತೆ ಬಗ್ಗೆ ನಾಗರಿಕರಲ್ಲಿ ಹರಿವು ಮೂಡಿಸುವ ಕೆಲಸ ಮಾಡಿದರು.

ಪೊನ್ನಂಪೇಟೆಯ ಪಟ್ಟಣದ ರಸ್ತೆ ಬದಿಯ ಎರಡು ಕಡೆಗಳಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ತೆಗೆದು ಸ್ವಚ್ಛತಾ ಕಾರ್ಯ ನಿರ್ವಹಿಸಿದರು. ಶಾಲೆಯ ಆವರಣದಿಂದ ಮುಂಜಾನೆ ಹೊರಟ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕಿ, ಅಧ್ಯಾಪಕ ವರ್ಗದವರ ಸಹಕಾರ ಪಡೆದು ಮುಖ್ಯ ಪಟ್ಟಣದವರೆಗೂ ವಿದ್ಯಾರ್ಥಿಗಳು ಸ್ವಚ್ಛತೆ ನಡೆಸಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ತನುಜ ಮಾತನಾಡಿ, ಸ್ವಚ್ಛತಾ ಆಂದೋಲನದಡಿ ಈ ಕೆಲಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಜನರಲ್ಲಿ ಹರಿವು ಮೂಡಿಸುತ್ತಿದ್ದಾರೆ. ಎಲ್ಲಾ ನಾಗರಿಕರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ವಿ.ಕೆ. ತಿಮ್ಮಯ್ಯ, ಶಿಕ್ಷಕಿ ಪ್ರಮೀಳಾ, ಸಹ ಶಿಕ್ಷಕರಾದ ಕರುಂಬಯ್ಯ, ಸಾಬೀತ್ ಹಾಜರಿದ್ದರು.