ಶನಿವಾರಸಂತೆ, ಫೆ. 17: ಅನಾರೋಗ್ಯ ಕಾರಣದಿಂದ ಯುವಕನೊಬ್ಬ ಬಾಡಿಗೆ ಮನೆಯ ಕೌಕೋಲಿಗೆ ಬೆಡ್‍ಶೀಟ್‍ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕೊಡ್ಲಿಪೇಟೆಯ ನಂದಿಪುರದಲ್ಲಿ ನಡೆದಿದೆ.
ಆರ್.ಎಸ್. ಸೋಮ (28) ಆತ್ಮಹತ್ಯೆಗೆ ಶರಣಾದ ಅವಿವಾಹಿತ ಯುವಕ ಕೆ.ಆರ್. ಪೇಟೆ ತಾಲೂಕಿನ ಕಾವಲುಕೊಪ್ಪಲು ರಾಜಗಟ್ಟ ಗ್ರಾಮದ ಸಣ್ಣೇಗೌಡ-ಶೈಲಮ್ಮ ದಂಪತಿಯ ಪುತ್ರ ಸೋಮ ಕೊಡ್ಲಿಪೇಟೆಯ ಎಸ್.ಜೆ.ಎನ್. ವೈನ್‍ಶಾಪ್‍ನಲ್ಲಿ ಕ್ಯಾಶಿಯರ್ ಕೆಲಸ ಮಾಡಿಕೊಂಡು ಅಲ್ಲಿನ ನಂದಿಪುರದ ನಾಗೇಶ್ ಅವರ ಬಾಡಿಗೆ ಮನೆಯಲ್ಲಿದ್ದರು.
ಬೆಳಿಗ್ಗೆ ಎಂದಿನಂತೆ ವೈನ್‍ಶಾಪ್ ಬಾಗಿಲು ತೆರೆಯದಿದ್ದ ಕಾರಣ ಕೆಲಸದ ಹುಡುಗ ರಾಕೇಶ್ ಮನೆಗೆ ಬಂದಾಗ ಬಾಗಿಲು ಮುಚ್ಚಿತ್ತು. ಕಿಟಕಿಯಿಂದ ನೋಡಿದಾಗ ಸೋಮ ನೇಣು ಹಾಕಿಕೊಂಡಿರುವುದು ಕಾಣಿಸಿದೆ. ಮನೆ ಮಾಲೀಕ ನಾಗೇಶ್ ಅವರು ಮೃತ ಸೋಮನಿಗೆ ಕೆಲಸ ಕೊಡಿಸಿದ ಅರಕಲಗೂಡು ತಾಲೂಕಿನ ದುಮ್ಮಲುಕೊಪ್ಪದ ಆನಂದ್ ಅವರಿಗೆ ವಿಚಾರ ತಿಳಿಸಿದ್ದು, ಅವರು ಮೃತರ ಸಂಬಂಧಿಕರಿಗೆ ತಿಳಿಸಿದ್ದಾರೆ.
ಮೃತ ಸೋಮರಿಗೆ ಮೂರ್ಛೆ ಕಾಯಿಲೆಯಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೆಭುವನ ಹಳ್ಳಿಯ ಸೋದರಮಾವ ರಂಗೇಗೌಡ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.