ಮಡಿಕೇರಿ, ಫೆ. 17: ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಗಾಂಜಾ ಆಯಿಲ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಿನಾಂಕ 18.7.2013 ರಂದು ರಾತ್ರಿ 8 ಗಂಟೆಗೆ ಮಡಿಕೇರಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ದೊಳಗಡೆ ಇರುವ ಶೌಚಾಲಯದ ಹತ್ತಿರ ಅಬ್ದುಲ್ ರಹಿಮಾನ್ ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿದ್ದ 400 ಗ್ರಾಂ. ಗಾಂಜಾ ಆಯಿಲನ್ನು ಪಿ.ಎಂ. ಶಾಜಿ ಮತ್ತು ಪಿ. ಮರ್ಕರ್ ಅವರ ಜೊತೆಗೂಡಿ ಕೆ. ಸಂತೋಷ್ ಎಂಬಾತನಿಗೆ ಮಾರಾಟ ಮಾಡುವ ಸಲುವಾಗಿ ವ್ಯವಹರಿಸುತ್ತಿರುವಾಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಡಿಕೇರಿ ನಗರ ಠಾಣೆಯವರು ಆರೋಪಿಗಳಿಂದ ಗಾಂಜಾ ಆಯಿಲನ್ನು ವಶಪಡಿಸಿ ಕೊಂಡು ಆರೋಪಿಗಳ ವಿರುದ್ಧ ಕಲಂ 20(ಬಿ) (11) (ಎ) ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆಯು ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯ ದಲ್ಲಿ ಜರುಗಿದ್ದು, ಆರೋಪಿತರಾದ ಅಬ್ದುಲ್ ರಹಿಮಾನ್, ಪಿ.ಎಂ. ಶಾಜಿ, ಪಿ. ಮರ್ಕರ್ ಹಾಗೂ ಕೆ. ಸಂತೋಷ್ ಎಂಬವರು ಶಿಕ್ಷಾರ್ಹ ಅಪರಾಧ ಎಸಗಿರುವುದು ಸಾಬೀತಾದ ಮೇರೆಗೆ ನ್ಯಾಯಾಧೀಶರಾದ ಮನು ಬಿ.ಕೆ. ಅವರು ಅಪರಾಧಕ್ಕಾಗಿ ಆರು ತಿಂಗಳು ಕಠಿಣ ಸಜೆ ಹಾಗೂ ತಲಾ ರೂ. 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಪ್ರಕರಣದ ವಿಚಾರಣೆಯನ್ನು ಸಹಾಯಕ ಸರಕಾರಿ ಅಭಿಯೋಜಕ ಸಂತೋಷ್ ಬಿ.ಎಸ್. ನಡೆಸಿದರು.