ಮಡಿಕೇರಿ, ಫೆ. 17: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರೂ. 80.50 ಲಕ್ಷ ವೆಚ್ಚದಲ್ಲಿ ರಾಜಾಸೀಟ್ ಬಳಿಯ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಕೂರ್ಗ್ ವಿಲೇಜ್ ಯೋಜನೆಗೆ ಸಂಬಂಧಿಸಿ ದಂತೆ ಸಾಧಕ-ಬಾಧಕಗಳನ್ನು ಪರಿಶೀಲಿಸಲು ನ್ಯಾಯಾಲಯ ಕಮಿಷನ್ ನೇಮಕ ಮಾಡಿದ್ದು, ಈ ಸಂಬಂಧ ಕಮಿಷನ್‍ಗೆ ಮಾಹಿತಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ.
ಕೂರ್ಗ್ ವಿಲೇಜ್ ಯೋಜನೆ ಯಿಂದ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಕಮಿಷನ್ ನೇಮಕ ಮಾಡುವಂತೆ ಅರ್ಜಿದಾರರ ಪರ ವಕೀಲ ರವಿಶಂಕರ್ ಕೋರಿಕೊಂಡ ಮೇರೆಗೆ ನ್ಯಾಯಾಧೀಶರಾದ ಬಿ.ಕೆ. ಮನು ಅವರು ಕಮಿಷನ್ ನೇಮಕ ಮಾಡಿ ಯೋಜನೆ ಬಗ್ಗೆ ಮಾಹಿತಿ ಸಲ್ಲಿಸುವಂತೆ ಸರಕಾರಿ ಅಭಿಯೋಜಕ ಶ್ರೀಧರನ್ ನಾಯರ್ ಹಾಗೂ ವಕೀಲ ರವಿಶಂಕರ್ ಅವರುಗಳಿಗೆ ಸೂಚಿಸಿ ಇಂದಿಗೆ ದಿನಾಂಕ ನಿಗದಿಪಡಿಸ ಲಾಗಿತ್ತು.
ಇಂದು ಈ ವಿಚಾರ ನ್ಯಾಯಾಲಯದಲ್ಲಿ ಪ್ರಸ್ತಾಪಗೊಂಡು, ವಕೀಲ ರವಿಶಂಕರ್ ಅವರು, ಕಮಿಷನ್ ಶುಲ್ಕ ಪಾವತಿಸಿ, ತಾ. 24 ರವರೆಗೆ ಕಾಲಾವಕಾಶ ಕೋರಿದರು. ನ್ಯಾಯಾಧೀಶರು ತಾ. 24ಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ.