ಮಡಿಕೇರಿ, ಫೆ. 17: ನಾಪೋಕ್ಲು ನಾಡಿನಲ್ಲಿ ಈಗಾಗಲೇ ಕಾಫಿ ಸುಮಗಳ ಘಮ ಹರಡುತ್ತಿದೆ. ವರ್ಷದ ಮೊದಲ ಮಳೆಗೆ ಮೈಯೊಡ್ಡಿಕೊಂಡ ಕಾಫಿ ತೋಟಗಳಲ್ಲಿ ಶ್ವೇತವರ್ಣದ ಸುಮಗಳ ರಾಶಿ ಕಣ್ಣುಕುಕ್ಕುತ್ತಿದೆ. ಆದರೆ, ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.ಕಾರಣ, ಆಕಾಲಿಕ ಮಳೆ ತಂದ ಅವಾಂತರ. ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್‍ನಲ್ಲಿ ಸುರಿಯಬೇಕಾಗಿದ್ದ ಮಳೆ, ಈ ಬಾರಿ ಫೆಬ್ರವರಿಯಲ್ಲೇ ಕಾಣಿಸಿಕೊಂಡು ಬೆಳೆಗಾರರಲ್ಲಿ ದಿಗಿಲು ಹುಟ್ಟಿಸಿದೆ. ಬಹುತೇಕ ತೋಟಗಳಲ್ಲಿ ಇನ್ನು ಕಾಫಿ ಕೊಯ್ಲು ಮುಗಿದಿಲ್ಲ. ಗಿಡಗಳಲ್ಲೇ ಉಳಿದುಕೊಂಡಿರುವ ಕಾಫಿ ಹಣ್ಣುಗಳ ಜೊತೆಗೆ ಇದೀಗ ಹೂವರಳಿರುವುದು ಆತಂಕಕಾರಿ ಬೆಳವಣಿಗೆ. ಹೂಗಳ ಮಧ್ಯೆಯಿರುವ ಹಣ್ಣನ್ನು ಕೊಯ್ಯಲು ಸಾಧ್ಯವಾಗುತ್ತಿಲ್ಲ. ಹಾಗೊಂದು ವೇಳೆ ಕೊಯ್ಯಲು ಪ್ರಯತ್ನಿಸಿದರೆ, ಮುಂದಿನ ಫಸಲಿಗೂ ಧಕ್ಕೆಯಾಗುವ ಸಾಧ್ಯತೆಯಿದೆ. ಬಹುತೇಕ ಕಾಫಿ ತೋಟಗಳಲ್ಲಿ ಕೆಂಪು ಹಣ್ಣುಗಳ ಮಧ್ಯೆ ಬೆಳ್ಳನೆ ಹೂಗಳು ಗೋಚರಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಅನೇಕ ತೋಟ ಮಾಲೀಕರು, ಕಾಫಿಕೊಯ್ಲಿನ ಕೆಲಸಕ್ಕೆ ಬ್ರೇಕ್ ಹಾಕಿದ್ದಾರೆ. ಪರಿಣಾಮವಾಗಿ ಕೆಲಸವಿಲ್ಲದೆ ಕಾರ್ಮಿಕರೂ ಕಾಲಹರಣ ಮಾಡುವಂತಾಗಿದೆ. ಈ ವ್ಯಾಪ್ತಿಯಲ್ಲಿ ಕಾಫಿ ಕೊಯ್ಲು ಕಾರ್ಯ ಭರದಿಂದ ಸಾಗಿದ್ದು, ಶೇಕಡ 70 ರಷ್ಟು ಕಾಫಿ ಕೊಯ್ಲು ಕಾರ್ಯ ಇನ್ನೂ ಬಾಕಿ ಇದೆ. ಅಲ್ಲದೇ, ಕೊಯ್ಲು ಮಾಡಿದ ಕಾಫಿಯನ್ನು ಕಣದಲ್ಲಿ ಒಣಗಿಸುವಾಗ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಕಾಫಿಯನ್ನು ಒಣಗಿಸಲು ಸಾಧ್ಯವಿಲ್ಲದಂತಾಗಿ ಬೆಳೆಗಾರರು ತೊಂದರೆಯನ್ನು ಅನುಭವಿಸುವಂತಾಗಿದೆ. ಕೆಲವೆಡೆಗಳಲ್ಲಿ ಕಾಫಿ ಕೊಯ್ಲು ಕಾರ್ಯ ಬಾಕಿ ಇರುವಾಗಲೇ ಗಿಡದಲ್ಲಿ ಕಾಫಿ ಹೂವುಗಳ ಅರಳಿ ನಿಂತಿರುವುದರಿಂದ ನಾಪೋಕ್ಲು ಹಾಗೂ ಪಾಲೂರು ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಅಭಿಪ್ರಾಯಿಸಿದ್ದಾರೆ.

-ದುಗ್ಗಳ ಸದಾನಂದ