ಮಡಿಕೇರಿ, ಫೆ. 17: ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ ತಾಲೂಕಿನ ಮೂರ್ನಾಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಲ ಸಂರಕ್ಷಣೆ, ಸದ್ಭಳಕೆ, ಮರುಪೂರೈಕೆ, ಅಂತರ್ಜಲ ಗುಣಮಟ್ಟ, ಮಳೆನೀರು ಸಂಗ್ರಹಣೆ ಹಾಗೂ ತೆರೆದ/ ತ್ಯಕ್ತ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳದಂತೆ ನಿಯಂತ್ರಿಸುವ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಅಂತರ್ಜಲ ಜನ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೊ, ನದಿ ಪಾತ್ರದಲ್ಲಿರುವ ಪ್ರದೇಶಗಳಲ್ಲಿಯೂ ಸಹ ಮರಳಿನ ಅಭಾವದಿಂದ ಎಂ-ಸೆಂಡ್ ಉಪಯೋಗಿಸುವ ಪರಿಸ್ಥಿತಿ ಬಂದಿದೆ. ಆದರೆ ಮನುಷ್ಯ ನೀರಿಗೆ ಪರ್ಯಾಯವಾಗಿ ಬೇರೆ ದ್ರವವನ್ನು ಕುಡಿಯಲು ಸಾಧ್ಯವಿಲ್ಲ. ನೀರಿಗೆ ನೀರೆ ಪರ್ಯಾಯ. ಆದ್ದರಿಂದ ಮಕ್ಕಳು ಈಗಿನಿಂದಲೇ ನೀರಿನ ಸದ್ಬಳಕೆಯ ಬಗ್ಗೆ ಅರಿವು ಮೂಡಿಸಿಕೊಂಡು ಮಳೆ ನೀರನ್ನು ಭೂಮಿಗೆ ಇಂಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಕಾರ್ಯಕ್ರಮ ಉದ್ಘಾಟಿಸಿ, ಮನುಷ್ಯ ನಗರೀಕರಣದ ಜೊತೆಗೆ ನೀರಿನ ಅತಿ ಬಳಕೆಯ ಪ್ರಮಾಣ ಸಾಮಾನ್ಯ ವಾಗುತ್ತಿದೆ. ಆದರೆ ಭೂಮಿಗೆ ನೀರನ್ನು ಇಂಗಿಸುವ ಎಲ್ಲಾ ವ್ಯವಸ್ಥೆಗಳು ನಾಶವಾಗುತ್ತಿವೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಲಭ್ಯತೆ ಹಾಗೂ ಗುಣಮಟ್ಟ ದಿನೇ ದಿನೇ ಕ್ಷೀಣಿಸುತ್ತಿದೆ. ಆದ್ದರಿಂದ ಮಾನವಕುಲ ಹಾಗೂ ಜೀವ ಸಂಕುಲದ ಒಳಿತಿಗಾಗಿ ನಾಗರಿಕರಾಗಿ ಎಲ್ಲರು ಪರಿಸರ ಸಂರಕ್ಷಣೆ ಹಾಗೂ ನೆಲ, ಜಲ ಸಂರಕ್ಷಣೆಗಾಗಿ ದುಡಿಯುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು. ಆಯೋಜಕಿ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಸೌಮ್ಯ ಕೆ.ಜಿ. ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳು ನೆಲ, ಜಲ ಪರಿಸರ ಸಂರಕ್ಷಣೆ ಮಾಡುವುದನ್ನು ಜೀವನದಲ್ಲಿ ಮಹೋನ್ನತ ಮೌಲ್ಯವಾಗಿಸಿಕೊಂಡು ಪ್ರತಿನಿತ್ಯದ ಚಟುವಟಿಕೆಯ ಭಾಗವಾಗಿ ಪರಿಗಣಿಸಿದರೆ ಮಾತ್ರ ಪರಿಸರ ಹಾಗೂ ಜಲಸಂರಕ್ಷಣೆ ಮಾಡಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾದ ಬಟ್ಟೆ ಬ್ಯಾನರ್ ಉಪ ಯೋಗಿಸಲಾಯಿತು. ಆಹ್ವಾನಿತರಿಗೆ ಹೂವಿನ ಗಿಡಗಳನ್ನು ನೀಡಲಾಯಿತು. ಪ್ಲಾಸ್ಟಿಕ್ ಬಾಟಲ್‍ನಲ್ಲಿ ಸಂಸ್ಕರಿಸಿದ ನೀರಿನಿಂದ ಆರೋಗ್ಯದ ಮೇಲೆ ಆಗುವ ದುಷ್ಟಪರಿಣಾಮದ ಬಗ್ಗೆ ಹಾಗೂ ಪ್ಲಾಸ್ಟಿಕ್ ತ್ಯಾಜಗಳಿಂದ ಆಗುವ ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಾಟಲ್ ನೀರು ಅರೋಗ್ಯಕ್ಕೆ ಹಾಗೂ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ ಪರಿಸರಕ್ಕೆ ಹಾನಿಕರವಾಗಿರುವುದರಿಂದ ಪ್ಲಾಸ್ಟಿಕ್ ಬಾಟಲ್ ತ್ಯಜಿಸಲು ಮನವಿ ಮಾಡುತ್ತಾ ವಿದ್ಯಾರ್ಥಿಗಳಿಗೆ, ಆಹ್ವಾನಿತರಿಗೆ ಹಾಗೂ ಶಿಕ್ಷಕರಿಗೆ ನೀರಿನ ಸ್ಟೀಲ್ ಬಾಟಲ್‍ಗಳನ್ನು ವಿತರಿಸಲಾಯಿತು.

ಎಸ್‍ಡಿಎಂಸಿ ಉಪಾಧ್ಯಕ್ಷ ಕಾಳ ಅಂತರ್ಜಲ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಪಿ. ಗುರುರಾಜ, ಶಾಲೆಯ ಇಕೋ ಕ್ಲಬ್ ಸಂಚಾಲಕರಾದ ಎಂ. ಪ್ರಣವಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.