ಕಣಿವೆ, ಫೆ. 16: ಗುಜರಾತ್ ರಾಜ್ಯದ ವಡೋದರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಕೊಡಗಿನ 13 ಮಂದಿ ಕ್ರೀಡಾ ಕಲಿಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಭಾರತ ಸರ್ಕಾರದ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಆಫ್ ಬರೋಡದ ವತಿಯಿಂದ ಕಳೆದ ಫೆ 5 ರಿಂದ 9 ರವರೆಗೆ ವಿವಿಧ ವಯೋಮಾನದ ಕ್ರೀಡಾಸಕ್ತರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ದೇಶದ ಹಲವು ರಾಜ್ಯಗಳಿಂದ ಒಟ್ಟು 400 ಮಂದಿ ಕ್ರೀಡಾಳುಗಳು ಭಾಗವಹಿಸಿದ್ದರು. ಈ ಪೈಕಿ ಕೊಡಗು ಜಿಲ್ಲೆಯಿಂದಲೂ 13 ಮಂದಿ ಪಾಲ್ಗೊಂಡಿದ್ದಾಗಿ ಕುಶಾಲನಗರದ ನಿವೃತ್ತ ಯೋಧ ಅಮೆ ಜನಾರ್ಧನ್ ಮಾಹಿತಿ ನೀಡಿದರು. ಈ ಕ್ರೀಡಾಕೂಟದ ಅಥ್ಲೆಟಿಕ್ ವಿಭಾಗದ 1500 ಮೀ ಓಟ ಹಾಗೂ 5000 ಮೀ. ಓಟದಲ್ಲಿ ಜನಾರ್ಧನ್ ಅವರು ಭಾಗವಹಿಸಿ ಮೊದಲ ಸ್ಥಾನದ ಬಹುಮಾನ ಪಡೆದಿದ್ದಾರೆ. ಹಾಗೆಯೇ ಜಿಲ್ಲೆಯಿಂದ ತೆರಳಿದ್ದ ಇತರರು ಕೂಡ ಉತ್ತಮ ಸಾಧನೆ ತೋರಿದ್ದಾರೆ.