ಸೋಮವಾರಪೇಟೆ, ಫೆ. 16: ಕಳೆದ ವರ್ಷ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನಾ ಧಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯಿತು.

ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಸದಸ್ಯರು ಸೇರಿದಂತೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಎಂ.ಬಿ. ಉಮೇಶ್, ಪ್ರಧಾನ ಕಾರ್ಯದರ್ಶಿ ದರ್ಶನ್ ಜೋಯಪ್ಪ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ಆಟೋ ಯೂನಿಯನ್ ಅಧ್ಯಕ್ಷ ಮೋಹನ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶನಿವಾರಸಂತೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ, ಬಿಜೆಪಿ ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಹಣತೆ ಹಚ್ಚಿ ನಮಿಸಿ, ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಜೆಪಿ ಮುಖಂಡ ಎಸ್. ಆರ್ ರಘು ವೀರಯೋಧರ ಸ್ಮರಿಸಿ ಮಾತನಾಡಿದರು. ಬಿಜೆಪಿ ನಗರಾಧ್ಯಕ್ಷ ಯತೀಶ್, ಪ್ರಮುಖರಾದ ಪ್ರವೀಣ್, ಸಚಿನ್, ಲೋಹಿತ್, ಹರೀಶ್ ಕುಮಾರ್, ರಕ್ಷಿತ್, ಅಶೋಕ್, ಸಂದೀಪ್, ಕಾರ್ಯಕರ್ತರು, ಆಟೋ ಚಾಲಕರ ಸಂಘ, ವಾಹನ ಚಾಲಕ ಸಂಘದವರು ಹಾಜರಿದ್ದರು.

ಪಾಲಿಬೆಟ್ಟ : ಕಳೆದ ವರ್ಷ ತಾ.16 ರಂದು ಉಗ್ರಗಾಮಿಗಳ ಧಾಳಿಗೆ ಬಲಿಯಾದ ನಲವತ್ತು ವೀರ ಸೈನಿಕರನ್ನು ಪಾಲಿಬೆಟ್ಟದ ಆಟೋ ಮಾಲೀಕರು ಮತ್ತು ಚಾಲಕರಿಂಧ ಸ್ಮರಿಸಲಾಯಿತು. ಪಾಲಿಬೆಟ್ಟದ ಬಸ್ ನಿಲ್ದಾಣದ ಬಳಿ ನಲವತ್ತು ಜನರ ಯೋಧರ ಭಾವಚಿತ್ರಕ್ಕೆ ಮೊಂಬತ್ತಿ ಹಚ್ಚಿ ಗೌರವ ಸಲ್ಲಿಸಲಾಯಿತು.