ಸೋಮವಾರಪೇಟೆ, ಫೆ. 15: ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಉಂಟಾದ ಅತಿವೃಷ್ಟಿಯಿಂದ ತಾಲೂಕಿನಾದ್ಯಂತ ಕಾಫಿ, ಏಲಕ್ಕಿ, ಕರಿಮೆಣಸು ಫಸಲು ಭಾರೀ ನಷ್ಟವಾಗಿದ್ದು, ಬೆಳೆಗಾರರು ತತ್ತರಿಸಿದ್ದಾರೆ. ಆದರೆ ಸರ್ಕಾರದಿಂದ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಹಲವು ಕಡೆಗಳಲ್ಲಿ ಗ್ರಾಮ ಲೆಕ್ಕಿಗರು ದಾಖಲೆಗಳನ್ನು ಸಲ್ಲಿಸುವಾಗ ಎಕರೆವಾರು ಕಡಿಮೆ ಮಾಡಿ ಗಣಕಯಂತ್ರದಲ್ಲಿ ಅಪ್‍ಲೋಡ್ ಮಾಡಿದ್ದು, ಇದರಿಂದಾಗಿ ಹಲವಷ್ಟು ಬೆಳೆಗಾರರಿಗೆ ಕಡಿಮೆ ಪರಿಹಾರ ಬಂದಿದೆ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಉಳಿದ ಜಾಗದ ದಾಖಲೆಗಳನ್ನು ಮರುಪರಿಶೀಲನೆ ನಡೆಸಿ ಗಣಕಯಂತ್ರದಲ್ಲಿ ಅಳವಡಿಸುವ ಮೂಲಕ ಸರ್ಕಾರದ ಪರಿಹಾರವನ್ನು ಬೆಳೆಗಾರರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಫಸಲ್ ಭಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕಾಫಿ ಮತ್ತು ಕರಿಮೆಣಸು ಬೆಳೆಗಳಿಗೂ ಅನ್ವಯವಾಗುವಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಆನೆ ಮತ್ತು ಕಾಡುಪ್ರಾಣಿಗಳಿಂದ ಬೆಳೆಗಾರರು ನಿರಂತರವಾಗಿ ಫಸಲು ನಷ್ಟ ಅನುಭವಿಸುತ್ತಿದ್ದು, ಸಾವಿರಾರು ರೂಪಾಯಿ ನಷ್ಟವಾದರೂ ಸಹ ಸರ್ಕಾರದಿಂದ ರೂ.500, ರೂ.1000 ಪರಿಹಾರ ದೊರಕುತ್ತಿದೆ. ಇದನ್ನು ಹೋಗಲಾಡಿಸಿ ವಾಸ್ತವಾಂಶವಾಗಿ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ಒದಗಿಸಬೇಕು. ಬೆಳೆಗಾರರು ತಮ್ಮ ಜಮೀನಿನ ದುರಸ್ತಿಗಾಗಿ ಕಂದಾಯ ಇಲಾಖೆಗೆ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರು ಮನವಿ ಸಲ್ಲಿಸಿದರು.

ಬೆಳೆಗಾರರು ಈ ಹಿಂದೆ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಫಸಲು ಸಾಲ ಮತ್ತು ದೀರ್ಘಾವಧಿ ಸಾಲ ಪಡೆದಿದ್ದು, ಎನ್.ಪಿ.ಎ. ಆಗಿರುತ್ತದೆ. ಇದೀಗ ಬ್ಯಾಂಕ್‍ನವರು ಓಟಿಎಸ್ ಜಾರಿಗೆ ತಂದಿದ್ದು, ಆ ಪ್ರಕಾರ ಮಾರ್ಚ್ 31ರೊಳಗೆ ಅಸಲು ಪಾವತಿಸಿದರೆ ಬಡ್ಡಿ ಕಡಿತವಾಗಲಿದೆ.

ಆದರೆ ಕಳೆದೆರಡು ವರ್ಷಗಳಿಂದ ಅತೀವೃಷ್ಟಿಯಿಂದಾಗಿ ಅಸಲು ಕಟ್ಟಲೂ ಸಹ ಬೆಳೆಗಾರರಿಗೆ ಅಸಾಧ್ಯವಾಗಿದ್ದು, ಈ ಹಿನ್ನೆಲೆ ಓಟಿಎಸ್ ವ್ಯವಸ್ಥೆಯನ್ನು 2021 ಮಾರ್ಚ್‍ವರೆಗೆ ವಿಸ್ತರಿಸುವಂತೆ ವಾಣಿಜ್ಯ ಬ್ಯಾಂಕ್‍ಗಳಿಗೆ ಸೂಚನೆ ನೀಡಬೇಕೆಂದು ಬೆಳೆಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಇದರೊಂದಿಗೆ ಮುಖ್ಯಮಂತ್ರಿ ಗಳಿಗೂ ಸಹ ಜಿಲ್ಲಾಧಿಕಾರಿಗಳ ಮುಖಾಂತರ ಪ್ರತ್ಯೇಕ ಮನವಿ ಸಲ್ಲಿಸಿದ್ದು, ರೈತರ, ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. 3 ಲಕ್ಷದವರೆಗೆ ಇರುವ ಶೂನ್ಯ ಬಡ್ಡಿದರದ ಸಾಲವನ್ನು 5ಲಕ್ಷಕ್ಕೆ ಏರಿಸಬೇಕು. 5 ಕ್ಕಿಂತ 10 ಲಕ್ಷದವರೆ ಶೇ.5ರ ಬಡ್ಡಿ ದರದಲ್ಲಿ ಸಾಲ ನೀಡಬೇಕು.

ಕೃಷಿ ಬೆಳೆಗಳಿಗೆ 10 ಅಶ್ವಶಕ್ತಿಗಳವರೆಗೆ ಇರುವ ಉಚಿತ ವಿದ್ಯುತ್ ಸೌಲಭ್ಯವನ್ನು ಕಾಫಿ ಬೆಳೆಗಾರರಿಗೂ ವಿಸ್ತರಿಸಬೇಕು. ಕಾಡಾನೆ ಮತ್ತು ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಿನ ಮುಂಗಡಪತ್ರದಲ್ಲಿ ವಿಶೇಷ ಆದ್ಯತೆ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸಲ್ಲಿಕೆ ಸಂದರ್ಭ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಎಂ. ಲವ, ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಬಿ.ಎಸ್. ಅನಂತ್‍ರಾಮ್, ಎಸ್.ಟಿ. ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.