ನಾಪೋಕ್ಲು, ಫೆ. 16: ರಾಜ್ಯದ ಬಿಜೆಪಿ ಸರಕಾರ ಜನಹಿತ ಯೋಜನೆಗಳನ್ನು ಜಾರಿಗೆ ತರುವ ಬದಲು ಅನ್ಯ ಪಕ್ಷದಿಂದ ವಲಸೆ ಬಂದವರಿಗೆ ಮಣೆ ಹಾಕುವ ಕಾಯಕದಲ್ಲಿ ನಿರತವಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಟಿ.ಎಂ.ಶಾಹಿದ್ ತೆಕ್ಕಿಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರಕಾರ ಜನಹಿತ ಯೋಜನೆಗಳನ್ನು ಜಾರಿಗೆ ತರುವ ಬದಲು ಅನ್ಯ ಪಕ್ಷದಿಂದ ವಲಸೆ ಬಂದವರಿಗೆ ಮಣೆ ಹಾಕುವ ಕಾಯಕದಲ್ಲಿ ನಿರತವಾಗಿದ್ದು, ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ಹೈಕಮಾಂಡ್ ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಅರಣ್ಯ ಇಲಾಖೆಯಲ್ಲಿ 17 ಪ್ರಕರಣಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಸಚಿವ ಸ್ಥಾನ ನೀಡಿರುವುದು ದುರಂತವೆಂದು ಹೇಳಿದ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶೀಘ್ರ ಪತನಗೊಳ್ಳಲಿದ್ದು, ಮಧ್ಯಂತರ ಚುನಾವಣೆ ಬರಲಿದೆ ಎಂದು ಭವಿಷ್ಯ ನುಡಿದರು.
ಸಿಎಎ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ದೇಶದ ಯುವ ಸಮೂಹದ ಸಮಸ್ಯೆಗಳಿಗೆ ಸ್ಪಂದಿಸಿ ಉದ್ಯೋಗ ಸೃಷ್ಟಿಯನ್ನು ಮಾಡದೆ ಗುಂಡು ಹಾರಿಸುವಂತೆ ಪ್ರಚೋದನೆ ನೀಡುತ್ತಿರುವ ಸಚಿವರ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಶಾಹಿದ್ ಹೇಳಿದರು. ಕೆಪಿಸಿಸಿ ಆದೇಶದ ಮೇರೆಗೆ ಕಾಂಗ್ರೆಸ್‍ನ ಬ್ಲಾಕ್ ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಅದರಂತೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕೆ.ಎ.ಇಸ್ಮಾಯಿಲ್ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮಾನಾಥ್, ಕಿಸಾನ್ ಘಟಕದ ಜಿಲ್ಲಾ ಸಂಚಾಲಕ ನೆರವಂಡ ಉಮೇಶ್, ಪಕ್ಷದ ಮುಖಂಡರಾದ ಪಿ.ಎಂ.ಖಾಸಿಂ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಮಾಜಿ ಅಧ್ಯಕ್ಷ ಅರೆಯಡ ಸೋಮಪ್ಪ ಉಪಸ್ಥಿತರಿದ್ದರು.